Site icon newsroomkannada.com

ಬೆತ್ತಲೆ ಫೋಟೊ ಕಳಿಸಿ ಹಣಕ್ಕೆ ಡಿಮ್ಯಾಂಡ್‌; ಕಿರಾತಕರು ಸೆರೆಯಾಗಿದ್ದು ಹೇಗೆ?

ಪರಿಚಯಸ್ಥಳ ಬೆತ್ತಲೆ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್

ಬೆಂಗಳೂರು: ಜೈಲಿನಲ್ಲಿದ್ದರೂ ಕಿರಾತಕ ರೌಡಿಯೊಬ್ಬ (Rowdy Sheeter) ಮಹಿಳೆಯೊಬ್ಬರಿಗೆ ಬೆದರಿಕೆ (Blackmail Case) ಹಾಕಿದ್ದ. ಯುವತಿಯೊಬ್ಬಳ ತಿರುಚಿದ ನಗ್ನ ಫೋಟೋ (Morphed nude photo) ಕಳಿಸಿ ಹಣ ನೀಡುವಂತೆ ಪೀಡಿಸಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಯುವತಿಯ ತಾಯಿ ಯಲಹಂಕ ನ್ಯೂಟೌನ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಇದೀಗ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು, ಜೈಲಿನಲ್ಲಿದ್ದ ಮನೋಜ್ ಅಲಿಯಾಸ್‌ ಕೆಂಚನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ. ಜತೆಗೆ ಕೆಂಚನಿಗೆ ಸಹಾಯ ಮಾಡಿದ್ದ ಯೊಗೇಶ್ ಹಾಗೂ ಸುಭಾಶ್ ಎಂಬುವವರನ್ನು ಬಂಧಿಸಲಾಗಿದೆ.
ರೌಡಿ ಮನೋಜ್ ಅಲಿಯಾಸ್‌ ಕೆಂಚ ಪರಿಚಯಸ್ಥಳ ಬೆತ್ತಲೆ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಕಳೆದ ವರ್ಷ ಆಗಸ್ಟ್‌ನಲ್ಲಿ ಈ ರೌಡಿ ಮನೋಜ್ ಮತ್ತವನ ಗ್ಯಾಂಗ್ ಯುವತಿಯ ತಾಯಿಗೆ ಫೋಟೊ ಕಳಿಸಿ ಹಣ ಕಿತ್ತಿತ್ತು. ʼಹಣ ಕೊಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೊ ನಿನ್ನ ಅಳಿಯನಿಗೆ ಕಳಿಸ್ತೀನಿʼ ಎಂದು ಬೆದರಿಕೆ ಹಾಕಿದ್ದ. ಮಗಳ ಭವಿಷ್ಯ ಎಲ್ಲಿ ಹಾಳಾಗುತ್ತೋ ಎಂದು ಆತಂಕಗೊಂಡಿದ್ದರು. ಹೀಗೆ ಫೋಟೊ ತೋರಿಸಿ ತಾಯಿಯಿಂದ 40 ಸಾವಿರ ಹಣ ಕಿತ್ತಿದ್ದ.

ಇಷ್ಟಕ್ಕೆ ಸುಮ್ಮನಾಗದೇ ಫೆಬ್ರವರಿ 9ರಂದು ಮತ್ತೆ ಮನೋಜ್‌ ಸಹಚರ ರೌಡಿ ಕಾರ್ತಿಕ್ ಎಂಬಾತ ಮಹಿಳೆಗೆ ಮತ್ತೆ ವಾಟ್ಸ್ಯಾಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ʼಮನು ಕಡೆಯ ಹುಡುಗ ನಾನು. 5 ಲಕ್ಷ ರೂ. ಹಣ ಕೊಡದಿದ್ದರೆ ಫೋಟೊವನ್ನು ನಿನ್ನ ಅಳಿಯನಿಗೆ ಕಳಿಸ್ತೀನಿʼ ಎಂದು ಅವಾಜ್ ಹಾಕಿದ್ದ. ಫೆಬ್ರವರಿ 12ರಂದು ರೌಡಿ ಮನು ಜೈಲಿನಿಂದಲೇ ಕರೆ ಮಾಡಿ ಧಮಕಿ ಹಾಕಿದ್ದ. ಐದು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ದುಷ್ಟರು ಫೈನಲ್ ಸೆಟಲ್ಮೆಂಟ್ ಮಾಡಿಕೋ ಎಂದು ಧಮ್ಕಿ ಹಾಕಿದ್ದ.

ವಾಟ್ಸ್ಯಾಪ್ ಹಾಗೂ ಮೆಸೆಂಜರ್ ಕಾಲ್ ಮಾಡಿ ಮನು ಹಾಗು ಕಾರ್ತಿಕ್‌ ಬೆದರಿಕೆ ಒಡ್ಡಿದ್ದರು. ಹಣ ನೀಡದಿದ್ದರೆ ಫೋಟೊ ಬಹಿರಂಗ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ಫೋಟೊ ಮಾರ್ಫ್ ಮಾಡಿ ಬೆದರಿಸುತ್ತಿದ್ದಾರೆ ಎಂದು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇನ್‌ಫಾರ್ಮೇಶನ್ ಟೆಕ್ನಾಲಜಿ ಕಾಯಿದೆ-67, ಐಪಿಸಿ 34 ಆಂಡ್ 384 ಅಡಿ ಪ್ರಕರಣ ದಾಖಲು ಮಾಡಲಾಗಿತ್ತು. ಸದ್ಯ ರೌಡಿ ಮನುವನ್ನು ಜೈಲಿನಿಂದ ಬಾಡಿವಾರೆಂಟ್ ಮೇಲೆ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Exit mobile version