main logo

SEP-23: ಇಂದು ‘ನೃತ್ಯಾಂತರಂಗ’ದಲ್ಲಿ ಅಪೂರ್ವ ಗೌರಿ ದೇವಸ್ಯ ನೃತ್ಯ ಪ್ರದರ್ಶನ

SEP-23: ಇಂದು ‘ನೃತ್ಯಾಂತರಂಗ’ದಲ್ಲಿ ಅಪೂರ್ವ ಗೌರಿ ದೇವಸ್ಯ ನೃತ್ಯ ಪ್ರದರ್ಶನ

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) (Sri Mookambika Cultural Academy) ಅರ್ಪಿಸುವ ‘ಚೆಂಬರ್ ಕನ್ಸರ್ಟ್’ (Chamber Concert) ಅಥವಾ  ‘ಗೃಹ ಮಾಲಿಕೆ’ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಭರತನಾಟ್ಯ (Bharatanatyam) ಪ್ರದರ್ಶನ ಕಾರ್ಯಕ್ರಮ ‘ನೃತ್ಯಾಂತರಂಗ’ ಸರಣಿಯ 105ನೇ ಕಾರ್ಯಕ್ರಮ ಇಂದು (ಸೆ.23) ನಡೆಯಲಿದೆ.

ನೃತ್ಯ ಗುರುಗಳಾಗಿರುವ ವಿದ್ವಾನ್ ದೀಪಕ್ ಪುತ್ತೂರು (Deepak Puttur) ಅವರ ಪರಿಕಲ್ಪನೆಯಾಗಿರುವ ಈ ನೃತ್ಯಾಂತರಂಗ ಸರಣಿ ಕಾರ್ಯಕ್ರಮ ಇದೀಗ ಶತ ಪ್ರದರ್ಶನಗಳನ್ನು ಪೂರೈಸಿ 105ನೇ ಪ್ರದರ್ಶನಕ್ಕೆ ಅಡಿಯಿಡುತ್ತಿದೆ.

ಈ ಬಾರಿಯ ನೃತ್ಯಾಂತರಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ ಅಪೂರ್ವ ಗೌರಿ ದೇವಸ್ಯ (Apoorva Gowri Devasya) ನೃತ್ಯ ಪ್ರದರ್ಶನ ನೀಡಲಿದ್ದು, ಮಂಗಳೂರಿನ ‘ಗಾನ-ನೃತ್ಯ ಅಕಾಡೆಮಿ’ಯ ನಿರ್ದೇಶಕರಾಗಿರುವ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ‘ನೃತ್ಯಾಂತರಂಗ-105’ರ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಇಂದಿನ ಈ ನೃತ್ಯಾಂತ್ಯರಂಗದಲ್ಲಿ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಗಿತೇಶ್ ನೀಲೇಶ್ವರ, ಕೊಳಲಿನಲ್ಲಿ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಸಹಕರಿಸಲಿದ್ದಾರೆ. ದರ್ಬೆಯಲ್ಲಿರುವ (Darbe) ಶಶಿಶಂಕರ ಸಭಾಂಗಣದಲ್ಲಿ (ShashiShankara Hall) ಇಂದು (ಸೆ.23) ಸಾಯಂಕಾಲ 6.00 ಗಂಟೆಗೆ ಸರಿಯಾಗಿ ‘ನೃತ್ಯಾಂತರಂಗ’ ಪ್ರಾರಂಭಗೊಳ್ಳಲಿದೆ.

ಅಪೂರ್ವ ಗೌರಿ ಡಿ ಅವರ ಸಂಕ್ಷಿಪ್ತ ಪರಿಚಯ:

ಬಹುರಾಷ್ಟ್ರೀಯ ಕಂಪೆನಿ ವಿಪ್ರೋದಲ್ಲಿ ಸೀನಿಯರ್ ಅಸೋಸಿಯೇಟ್ ಆಗಿರುವ ಅಪೂರ್ವ ಅವರು ತಮ್ಮ ಆರನೇ ವಯಸ್ಸಿನಿಂದಲೇ ಭರತನಾಟ್ಯ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.

ಮೊದಲಿಗೆ ಮಂಗಳೂರಿನ ಗಾನ-ನೃತ್ಯ ಅಕಾಡೆಮಿಯ ಗುರುಗಳಾಗಿರುವ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಮಾಡಿ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯನ್ನು ಪೂರ್ಣಗೊಳಿಸಿದರು.

ಬಳಿಕ, ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ಗುರುಗಳಾಗಿರುವ ವಿದ್ವಾನ್ ದೀಪಕ್ ಕುಮಾರ್ , ವಿದುಷಿ ಪ್ರೀತಿಕಲಾ ಮತ್ತು ವಿದ್ವಾನ್ ಬಿ ಗಿರೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಮುಂದುವರಿಸುತ್ತಾ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು 2016ರಲ್ಲಿ ಮತ್ತು ವಿದ್ವತ್ ಗ್ರೆಡ್ ಪರೀಕ್ಷೆಯನ್ನು 2019ರಲ್ಲಿ ಪೂರ್ಣಗೊಳಿಸಿದ್ದಾರೆ.

ಸಾಯಿ ನೃತ್ಯೋತ್ಸವ ಬೆಂಗಳೂರು, ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ, ಆಳ್ವಾಸ್, ಆಳ್ವಾಸ್ ನುಡಿಸಿರಿ, ಕಾರ್ಕಳ ಮತ್ತು ಶ್ರವಣಬೆಳಗೊಳದಲ್ಲಿ ನಡೆದಿದ್ದ ಮಸ್ತಕಾಭಿಷೇಕ, ಕರಾವಳಿ ಉತ್ಸವ, ಜೈನ್ ಮಿಲನ್ ಮೊದಲಾದ ಪ್ರತಿಷ್ಠಿತ ಕಾರ್ಯಕ್ರಮಗಳು ಮತ್ತು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುವ ಅಪೂರ್ವ ಅವರು ‘ನಟನಂ’ ಡ್ಯಾನ್ಸ್ ಅಕಾಡೆಮಿಯ ಫೇಸ್ಬುಕ್ ಪೇಜ್ ನಲ್ಲಿ ‘ಏಕ ವ್ಯಕ್ತಿ’ ಪ್ರದರ್ಶನವನ್ನು ನೀಡಿ ಗಮನಸೆಳೆದಿದ್ದಾರೆ.

ಬೆಂಗಳೂರಿನ ಲಾಸ್ಯ ವರ್ಧನ ಟ್ರಸ್ಟ್ ನಡೆಸಿದ ರಾಜ್ಯಮಟ್ಟದ ‘ವರ್ಣೋತ್ಸವ-2022’ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಅಪೂರ್ವ ಪಡೆದುಕೊಂಡಿದ್ದಾರೆ.

ಈಗಾಗಲೇ, ‘ಗೃಹ ಮಾಲಿಕೆ’ ಪರಿಕಲ್ಪನೆಯಲ್ಲಿ ಪ್ರತೀ ತಿಂಗಳು ನಡೆಯುತ್ತಿರುವ ಈ ‘ನೃತ್ಯಾಂತರಂಗ’ ಕಾರ್ಯಕ್ರಮ ಇದೀಗ ಶತಕದ ಗಡಿಯನ್ನು ದಾಟಿ 104 ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿರುವುದು ಪುತ್ತೂರು ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಒಂದು ಹೆಗ್ಗಳಿಕೆಯೇ ಸರಿ.

ಈ ‘ನೃತ್ಯಾಂತರಂಗ’ದ 104 ಕಾರ್ಯಕ್ರಮಗಳಲ್ಲಿ, ರಾಜ್ಯ ಮತ್ತು ದೇಶ-ವಿದೇಶಗಳಲ್ಲೂ ಹೆಸರುವಾಸಿಯಾಗಿರುವ ಭರತನಾಟ್ಯ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡಿರುವುದು ‘ನೃತ್ಯಾಂತರಂಗ’ದ ಹೆಗ್ಗಳಿಕೆಯಾಗಿದೆ. ಕಳೆದ ಶನಿವಾರ (ಸೆ.16) ನಡೆದಿದ್ದ ನೃತ್ಯಾಂತರಂಗ-104ರಲ್ಲಿ ವಿದುಷಿ ಅನ್ನಪೂರ್ಣ ರಿತೇಶ್ ನೃತ್ಯ ಪ್ರದರ್ಶನ ನೀಡಿದ್ದರು.

ಕಲೆಯೊಂದು ನಿರಂತರವಾಗಿ ಜನರನ್ನು ತಲುಪುತ್ತಿರಬೇಕು ಮತ್ತು ಅದು ಕೇವಲ ಮನೋರಂಜನೆ ನೀಡುವುದು ಮಾತ್ರವಲ್ಲದೇ ಮಾಹಿತಿಪೂರ್ಣವಾಗಿಯೂ ಮೂಡಿಬಂದು ಕಲೆಯ ಸಂಪೂರ್ಣ ರಸಾನುಭವ ಪ್ರೇಕ್ಷಕರಿಗೆ ಸಿಗಬೇಕೆಂಬ ಸದುದ್ದೇಶದಿಂದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಾರಂಭಿಸಿದ ‘ಗೃಹ ಮಾಲಿಕೆ’ ಕಾರ್ಯಕ್ರಮವೇ ‘ನೃತ್ಯಾಂತರಂಗ’ವಾಗಿದೆ.

ಭಾರತದ ಮೇರು ಕಲೆಯಾಗಿರುವ ಭರತನಾಟ್ಯ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಮಾದರಿಯಾಗಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ರೂವಾರಿಯಾಗಿರುವ ವಿದ್ವಾನ್ ದೀಪಕ್ ಕುಮಾರ್ ಸಹೃದಯ ಪ್ರೇಕ್ಷಕರಲ್ಲಿ ಮತ್ತು ಕಲಾ ಪೋಷಕರಲ್ಲಿ ವಿನಂತಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!