Site icon newsroomkannada.com

ಧಂ ಎಳೆಯಕ್ಕೂ ಆಗಲ್ಲ ಗುರು: ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ

ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ

ಬೆಂಗಳೂರು: ಸಿಗರೇಟ್​​ಗಳ (cigarettes )ಮತ್ತು ಇತರೆ ತಂಬಾಕು (Tobacco) ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ವಿಧೇಯಕ ಇಂದು (ಫೆ.21) ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಂದ (Schools) ನೂರು ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ಪ್ರಮಾಣ 100 ರೂ. ರಿಂದ 1000 ರೂ. ಗೆ ಏರಿಕೆ ಮಾಡಲಾಗಿದೆ.

ಇನ್ನು ಸಿಗರೇಟು ಮಾರಾಟದ ವಯೋಮಿತಿ 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಯಾವುದೇ ಬಾರ್ ರೆಸ್ಟೋರೆಂಟ್ ಹಾಗೂ ಇತರೆ ಕಡೆಗಳಲ್ಲಿ ಹುಕ್ಕಾ ಬಾರ್​ ನಿಷೇಧಿಸಲಾಗಿದೆ. ಹುಕ್ಕಾ ಬಾರ್ ಅನಧಿಕೃತವಾಗಿ‌ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 2024ರ ಸಿಗರೇಟ್ ಸೇವನೆ ಮತ್ತು ಜಾಹೀರಾತು ನಿಷೇಧ, ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ಮತ್ತು ಸರಬರಾಜು ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್, ಹುಕ್ಕಾಬಾರ್‌ಗಳನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬಾರದು ಅಂತಿದೆ. ಆದರೆ, ಅನೇಕ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಬಾರ್‌ಗಳನ್ನು ಆರಂಭಿಸಿದ್ದಾರೆ. ಸಿಗರೇಟ್ ಸೇದೋದೇ ತಪ್ಪು ಅಂತ ಹೇಳಿದರೆ, ಮತ್ತೊಂದು ರೂಪದಲ್ಲಿ ತಂದಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದೇವೆ ಎಂದು ಹೇಳಿದರು.

ಕಾನೂನಿನಲ್ಲಿ 18 ವರ್ಷದೊಳಗಿನವರಿಗೆ ಮಾರಬಾರದು ಎಂದು ಇತ್ತು. ಅದನ್ನು 21 ವರ್ಷಕ್ಕೆ ಅಂತ ಏರಿಸಲಾಗಿದೆ. ಶಾಲಾ – ಕಾಲೇಜುಗಳ ಮೂರು ಮೀಟರ್ ಒಳಗೆ ಮಾರಾಟ ಮಾಡಬಾರದು ಅಂತ ನಿಯಮ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಇನ್ನೂರು ದಂಡ ಇತ್ತು. ಈಗ ಸಿಗರೇಟ್ ಸೇದುವವರಿಗೆ 1000 ರೂ. ದಂಡ ಹಾಕಲಾಗುವುದು. ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಯುವಕರು ಹುಕ್ಕಾ ಬಾರ್‌ಗೆ ಹೋಗಿ ಅಡಿಕ್ಟ್ ಆಗುತ್ತಿದ್ದಾರೆ. ಯುವ ಜನತೆ ಇದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ. ಇದರಿಂದ ಬೇರೆ ರೀತಿಯ ಅಡ್ಡ ಪರಿಣಾಮ‌ ಆಗುತ್ತಿದೆ ಎಂದು ದಿನೇಶ್‌ ಗುಂಡೂರಾವ್‌ ಕಳವಳ ವ್ಯಕ್ತಪಡಿಸಿದರು.

Exit mobile version