ಪುತ್ತೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹತ್ಯೆಗಳು ಹೆಚ್ಚಾಗಿದೆ. ಇದು ಕೊಲೆಗಳ ಸರಕಾರ. ಕೇವಲ ಒಂದೂವರೆ ತಿಂಗಳಲ್ಲಿ ಮುನಿಗಳ ಹತ್ಯೆ ಸೇರಿದಂತೆ ಹತ್ತಾರು ಜನರ ಹತ್ಯೆ ಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಈ ಹಿಂದೆ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ 3000 ಕ್ಕೂ ಮಿಕ್ಕಿದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರಕಾರ ರೈತ ವಿರೋಧಿ ಸರಕಾರವಾಗಿದೆ ಎಂದರು. ರಾಜ್ಯ ಸರಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ. ಪೊಲೀಸ್ ಇಲಾಖೆ ರಾಜ್ಯ ಸರಕಾರದ ಮಾತು ಕೇಳುತ್ತಿಲ್ಲ. ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಲಾಗಿದೆ. ವರ್ಗಾವಣೆ ವಿಷಯದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಡುವೆ ಮನಸ್ತಾಪ ಶುರುವಾಗಿದೆ ಎಂದು ಆರೋಪಿಸಿದರು. ಜೈನ ಮುನಿ ಹತ್ಯೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ತೆರಳಿ ಸತ್ಯಶೋಧನೆ ನಡೆಸಿದ್ದೇನೆ. ಮುನಿಗಳ ಹತ್ಯೆಯನ್ನು ಕ್ರೂರವಾಗಿ ಮಾಡಿದ್ದಾರೆ.
ಈ ಕುರಿತು ವರದಿಯನ್ನೂ ಸಿದ್ಧಪಡಿಸಲಾಗಿದೆ. ಮೈಸೂರಿನಲ್ಲಿ ನಡೆದ ಹತ್ಯೆ ಸಂಬಂಧಿಸಿದಂತೆ ಸಿ.ಟಿ.ರವಿ ನೇತೃತ್ವದ ತಂಡವೂ ವರದಿಯನ್ನು ನೀಡಿದೆ. ಎಲ್ಲಾ ಹತ್ಯೆಗಳ ತನಿಖೆಯನ್ನು ಸರಕಾರ ಪಾರದರ್ಶಕವಾಗಿ ನಡೆಸಬೇಕು ಎಂದು ಒತ್ತಾಯಿಸಿದರು. ಮೈತ್ರಿ ಚರ್ಚೆ ನಡೆದಿಲ್ಲ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತು ಜೆಡಿಎಸ್ ಸೇರಿದಂತೆ ಯಾವ ಪಕ್ಷಗಳ ಜೊತೆಗೂ ಚರ್ಚೆ ನಡೆದಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪುತ್ತೂರಿನಲ್ಲಿ ಮಾತನಾಡಿದ ಅವರು ಪಕ್ಷ ಇದೀಗ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ಜನವರಿ-ಫೆಬ್ರವರಿ ಬಳಿಕವೇ ಈ ಬಗ್ಗೆ ನಿರ್ಧಾರವಾಗಲಿದೆ.