Site icon newsroomkannada.com

‘ನಮ್ಮನ್ನಾಳುವವರು ನಾಸ್ತಿಕರಾಗಿದ್ದರೂ…’ – ಸನಾತನ ಚರ್ಚೆಗೆ ನಿರ್ಮಲಾನಂದ ಶ್ರೀಗಳು ಹೀಗಂದ್ರು..

ಮೈಸೂರು: ‘ಧರ್ಮದ ಬಗ್ಗೆ ತಿಳಿದುಕೊಂಡವರು ಮಾತನಾಡುವುದಿಲ್ಲ. ತಿಳಿದುಕೊಳ್ಳದವನು ತಮ್ಮ ಧರ್ಮದ ಬಗ್ಗೆ ಮಾತ್ರವಲ್ಲದೇ ಇತರೆ ಧರ್ಮಗಳ ಬಗ್ಗೆಯೂ ಮಾತನಾಡುತ್ತಾನೆ..’ ಎಂದು ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ನೀಡಿರುವ ​ಆಕ್ಷೇಪಾರ್ಹ ಹೇಳಿಕೆ ಹಿನ್ನಲೆಯಲ್ಲಿ ಶ್ರೀಗಳು ಈ ಮಾತುಗಳನ್ನು ಉಲ್ಲೇಖಿಸಿದರು.

‘ನಾಡನ್ನಾಳುವ ದೊರೆ ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆ ಗೌರವಿಸಬೇಕು. ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಬೇರೊಂದು ಧರ್ಮಕ್ಕೆ ಸೆಳೆಯಲು ಸಾಧ್ಯವಿಲ್ಲ..’  ಎಂದು ಹೇಳಿದ ಸ್ವಾಮೀಜಿಯವರು, ‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ…!’ ಮಹಾಭಾರತದ ಉಕ್ತಿಯನ್ನು ಉಲ್ಲೇಖಿಸಿ ಗಮನ ಸೆಳೆದರು.

‘ಸನಾತನ’ ಪದಕ್ಕೆ ‘ಶಾಶ್ವತ’ ಎನ್ನುವ ಅರ್ಥವಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದಗಳ ಬಗ್ಗೆ ನಿಗಾ ಇರಬೇಕು..’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಹಿಂದೂ ಧರ್ಮದ ಪರ ಹೋರಾಟದ ಸುಳಿವು ನೀಡಿದ ಸ್ವಾಮೀಜಿಯವರು, ‘ಇದೇ ವಿಚಾರಕ್ಕೆ ಪ್ರತ್ಯೇಕವಾಗಿ ಸಭೆ ಕರೆಯುವ ಅನಿವಾರ್ಯತೆ ಬರಬಹುದು, ಆ ಸಂದರ್ಭದಲ್ಲಿ ಮುಖ್ಯವಾಗಿ ಚರ್ಚಿಸೋಣ’ ಎಂದರು. ಆದರೆ ತಾವೇ ನಾಯಕತ್ವ ವಹಿಸುವ ಪ್ರಶ್ನೆಗೆ ಸ್ವಾಮೀಜಿಯವರು ಮೌನ ತಾಳಿದರು.

ದೇಶದ ಹೆಸರನ್ನು ‘ಭಾರತ’ ಎಂದು ಮರುನಾಮಕರಣ ಮಾಡುವ ಬಗ್ಗೆ ಪ್ರಾರಂಭಗೊಂಡಿರುವ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶ್ರೀಗಳು, ‘ಇಂಗ್ಲಿಷ್​ನಲ್ಲಿ ಇಂಡಿಯಾ, ಹಿಂದಿಯಲ್ಲಿ ಭಾರತ ಅಂತ ಬಳಸುತ್ತಿದ್ದೇವೆ, ಈ ಚರ್ಚೆ ಯಾವಾಗ, ಹೇಗೆ ಶುರುವಾಯ್ತು ಗೊತ್ತಿಲ್ಲ. ಹಿಂದಿ, ಕನ್ನಡದಲ್ಲಿ ಬರೆಯುವಾಗ ಭಾರತ ಸರ್ಕಾರ ಎಂದೇ ಬರೆಯುತ್ತೇವೆ. ಕೆಲವೊಮ್ಮೆ ಇಂಡಿಯನ್​ ಗವರ್ನಮೆಂಟ್ ಎಂದು ಬಳಸುತ್ತೇವೆ. ಕೇಂದ್ರ ಸರ್ಕಾರವೇ, ಮರು ನಾಮಕರಣ ಪ್ರಸ್ತಾಪ ನಮ್ಮ ಮುಂದೆ ಇಲ್ಲ’ ಎಂದು ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಚರ್ಚೆ ಅನಗತ್ಯ ಎಂಬುದು ನನ್ನ ಅಭಿಪ್ರಾಯ’ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

Exit mobile version