Site icon newsroomkannada.com

ನಿಫಾ ವೈರಸ್ ಆತಂಕ: ನಾಲ್ಕು ಜಿಲ್ಲೆಗಳ ಅಧಿಕಾರಿಗಳ ಜೊತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ

ಮಂಗಳೂರು: ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ, ಗಡಿಭಾಗದಲ್ಲಿರುವ ನಾಲ್ಕು ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲಾ ಆರೋಗ್ಯ ಅಧಿಕಾರಿ, ಸರ್ವೇಕ್ಷಣಾ ಅಧಿಕಾರಿ ಮತ್ತು ರಾಜ್ಯದ ಅಧಿಕಾರಿಗಳ ಜೊತೆ ಮಂಗಳೂರಿನಲ್ಲಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಈ ವರೆಗೆ ರಾಜ್ಯದಲ್ಲಿ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಶಂಕಿತ ಪ್ರಕರಣವೂ ಕೂಡ ಪತ್ತೆಯಾಗಿಲ್ಲ. ಆದರೂ ಗಡಿಭಾಗದಲ್ಲಿ ಎಚ್ಚರಿಕೆಯಿಂದ ಇರಲು ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಚಾಮರಾಜನಗರದ ಹೆಚ್ ಡಿ ಕೋಟೆ, ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾದ ಪ್ರದೇಶಕ್ಕೆ ಹತ್ತಿರ ಇದೆ. ಅಲ್ಲಿ ತಾಂಡ, ಹಾಡಿ ಇರುವುದರಿಂದ‌ ಹೆಚ್ಚಿನ ಎಚ್ಚರಿಕೆ ವಹಿಸಲು ಜಾಗೃತಿ ಮೂಡಿಸಲಾಗಿದೆ. ಕೇರಳದ ಗಡಿಭಾಗ ಜಿಲ್ಲೆಯ ಕ್ಲಿನಿಕ್ ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಚೆಕ್ ಪೋಸ್ಟ್ ನಲ್ಲಿ ಕೇರಳದಿಂದ ಬಂದು ಹೋಗಿರುವವರ ಸ್ಕ್ರೀನಿಂಗ್ ಮಾಡಬೇಕು. ಜ್ವರ, ಕೆಮ್ಮು ಇರುವವರ ತಪಾಸಣೆ ಮಾಡಲು ಸೂಚಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಚೆಕ್ ಪೋಸ್ಟ್​ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಒಂದು ಪ್ರಕರಣ ಕೂಡ ಆಗಬಾರದು. ಈ ರೋಗಕ್ಕೆ ಚಿಕಿತ್ಸೆ ಇಲ್ಲದೆ ಇರುವುದರಿಂದ‌ ಮತ್ತು ಮರಣ ಪ್ರಮಾಣ 40-70% ರಷ್ಟು ಹೆಚ್ಚು ಇರುವುದರಿಂದ ಎಚ್ಚರಿಕೆಯಿಂದ ಇರಬೇಕು. ಈ ರೋಗಕ್ಕೆ ಔಷಧಿ ಇಲ್ಲ, ಲಸಿಕೆ‌ ಇಲ್ಲ. ಆದ ಕಾರಣ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.

ಕೇರಳ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಲು ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಂಗಳೂರು ಕೇರಳ ಸಂಪರ್ಕ ಜಾಸ್ತಿ ಇದೆ. ನಿಫಾ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಹೆಚ್ಚು ಕಡಿಮೆ ಆದರೆ ಕ್ವಾರಂಟೈನ್, ಬೆಡ್ ಗುರುತು ಮಾಡಲಾಗಿದೆ. ಮಾಸ್ಕ್, ಕಿಟ್ ರೆಡಿ ಇದೆ. ಈ ಬಗ್ಗೆ ಭಯ ಅಗತ್ಯ ಇಲ್ಲ. ಜನ ಆತಂಕಗೊಳ್ಳಬೇಕಿಲ್ಲ ಎಂದರು.

Exit mobile version