Site icon newsroomkannada.com

ಕೋಝಕ್ಕೋಡ್ ನಲ್ಲಿ ನಿಫಾ ವೈರಸ್ ಗೆ ಇನ್ನೆರಡು ಬಲಿ!

(Representative Image Used)

ಕೋಝಿಕ್ಕೋಡ್: ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಜ್ವರಕ್ಕೆ ಸಂಬಂಧಿಸಿದ ಎರಡು ‘ಅಸ್ವಾಭಾವಿಕ’ ಸಾವುಗಳು ದಾಖಲಾದ ನಂತರ, ಕೇರಳ ಆರೋಗ್ಯ ಇಲಾಖೆ ಕೋಝಿಕ್ಕೋಡ್ (Kozhikode) ಜಿಲ್ಲೆಯಲ್ಲಿ ಎಚ್ಚರಿಕೆ ನೀಡಿದೆ.ಎರಡು ಸಾವುಗಳು ನಿಪಾ ವೈರಸ್‌ನಿಂದ (Nipah virus) ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಮೃತರೊಬ್ಬರ ಸಂಬಂಧಿಕರು ತೀವ್ರ ನಿಗಾ ಘಟಕದಲ್ಲಿ(ICU) ಇದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಈ ನಿಟ್ಟಿನಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಹಿಂದೆ 2018 ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಪಾ ಹಾವಳಿ ಕಾಣಿಸಿಕೊಂಡಿತ್ತು, ನಂತರ 2021ರಲ್ಲಿ ಸಹ ಕೋಝಿಕೋಡ್ ನಲ್ಲಿ ನಿಪಾ ಪ್ರಕರಣ ವರದಿಯಾಗಿತ್ತು. ದಕ್ಷಿಣ ಭಾರತದಲ್ಲಿ ಮೊದಲ ನಿಪಾ ವೈರಸ್ ಹರಡುವಿಕೆಯು ಮೇ 19, 2018 ರಂದು ಕೋಝಿಕ್ಕೋಡ್‌ನಲ್ಲಿ ವರದಿಯಾಗಿದೆ.

ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತೆ ನಿಪಾ

ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ನಿಪಾ ವೈರಸ್ ಸೋಂಕು ಪ್ರಾಣಿಗಳಿಂದ ಜನರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ಜನರಲ್ಲಿ, ಇದು ಲಕ್ಷಣ ರಹಿತ (ಸಬ್‌ಕ್ಲಿನಿಕಲ್) ಸೋಂಕಿನಿಂದ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್ವರೆಗೆ ಹಲವಾರು ಕಾಯಿಲೆಗಳನ್ನು ಉಂಟುಮಾಡುತ್ತದೆ.

ನಿಪಾ ವೈರಸ್ ಬಗ್ಗೆ ಮಾಹಿತಿ

ತಜ್ಞರ ಪ್ರಕಾರ ನಿಪಾ ಒಂದು ಪ್ಯಾರಾಮಿಕ್ಸೊವೈರಸ್. ಇದು ಸಾಮಾನ್ಯ ಶೀತವನ್ನು ಉಂಟುಮಾಡುವ ಬೆರಳೆಣಿಕೆಯ ವೈರಸ್‌ಗಳಲ್ಲಿ ಒಂದಾದ ಹ್ಯೂಮನ್ ಪ್ಯಾರೆನ್‌ಫ್ಲುಯೆಂಜಾ ವೈರಸ್‌ಗೆ ಸಂಬಂಧಿಸಿದೆ. ಇದರ ನೈಸರ್ಗಿಕ ಪ್ರಸಾರಕಗಳೆಂದರೆ ಹಣ್ಣಿನ ಬಾವಲಿ, ದೊಡ್ಡ ಮತ್ತು ಸಣ್ಣ ಹಾರುವ ನರಿಗಳು.

ಇಲ್ಲಿಯವರೆಗೆ ನಿಪಾ ವೈರಸ್‌ನ ಮಾನವ ಸೋಂಕಿನ ಎಲ್ಲಾ ಪ್ರಕರಣಗಳು ಸೋಂಕಿತ ಬಾವಲಿಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಕಾರಣದಿಂದಾಗಿವೆ. ಬಾವಲಿ ಮೂತ್ರದಿಂದ ಕಲುಷಿತಗೊಂಡ ಹಣ್ಣು ಅಥವಾ ಹಣ್ಣಿನ ರಸವು ಜನರಿಗೆ ವೈರಸ್ ಹರಡುವ ಪ್ರಮುಖ ಮಾರ್ಗವಾಗಿದೆ.

ಮುಖ್ಯವಾಗಿ ನಿಪಾ ವೈರಸ್ ಜೀವಕೋಶಗಳನ್ನು ಪ್ರವೇಶಿಸಲು ಬಳಸುವ ಪ್ರೋಟೀನ್ಗಳು, ಮೆದುಳು ಮತ್ತು ಕೇಂದ್ರ ನರ ಅಂಗಾಂಶಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ನಿಪಾ ಸೋಂಕು ಹೆಚ್ಚಿನ ಸಂದರ್ಭಗಳಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ನಿಂದ ಸಾವಿಗೆ ಕಾರಣವಾಗುತ್ತದೆ, ಏಕೆಂದರೆ ವೈರಸ್ ಜೀವಕೋಶಗಳಿಗೆ ಪ್ರವೇಶಿಸಲು ಸುಲಭವಾದ ಅಂಗಾಂಶಗಳಲ್ಲಿ ವೈರಸ್ ಉತ್ತಮವಾಗಿ ಪುನರಾವರ್ತಿಸುತ್ತದೆ.

Exit mobile version