main logo

ಧಾರಾವಾಹಿಯಲ್ಲಿ ದೈವದ ವೇಷ, ಕಮೀಷನರ್ ಗೆ ದೂರು..! ತುಳುನಾಡಿನ ಜನರ ಕೆಂಗಣ್ಣಿಗೆ ಗುರಿಯಾದ ಆ ಸೀರಿಯಲ್ ಯಾವುದು..?

ಧಾರಾವಾಹಿಯಲ್ಲಿ ದೈವದ ವೇಷ, ಕಮೀಷನರ್ ಗೆ ದೂರು..! ತುಳುನಾಡಿನ ಜನರ ಕೆಂಗಣ್ಣಿಗೆ ಗುರಿಯಾದ ಆ ಸೀರಿಯಲ್ ಯಾವುದು..?

ಖಾಸಗಿ ವಾಹಿನಿಯೊಂದು ತನ್ನ ಧಾರವಾಹಿಯಲ್ಲಿ ಕರಾವಳಿಯ ನಂಬಿಕೆ ಭೂತಾರಾಧನೆ ಬಗ್ಗೆ ಬಳಸಿಕೊಂಡಿದ್ದು, ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ ಭುಗಿಲೆದ್ದಿದೆ. ಮಾತ್ರವಲ್ಲ ತುಳುನಾಡ ಮಂದಿ ಕೂಡ ಈ ಬಗ್ಗೆ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ವಾಹಿನಿ, ಧಾರಾವಾಹಿ ತಂಡ ಮತ್ತು ಡೈರೆಕ್ಟರ್‌ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರ್‌ ಪ್ರೀತಮ್‌ ಶೆಟ್ಟಿ ಈ ಧಾರಾವಾಹಿ ಯನ್ನು ನಿರ್ದೇಶನ ಮಾಡುತ್ತಿದ್ದಾರೆ.
ದೈವಾರಾಧನೆ ಪ್ರದರ್ಶನ ಧಾರಾವಾಹಿಗೂ ವ್ಯಾಪಿಸಿದೆ. ಧಾರಾವಾಹಿಯಲ್ಲಿ ದೈವಕೋಲ ಮಾಡಿರುವುದಕ್ಕೆ ತುಳುನಾಡ ದೈವಾರಾಧಕರು ಗರಂ ಆಗಿದ್ದಾರೆ. ಭೂತಾರಾಧನೆ ಪ್ರದರ್ಶನ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಖಾಸಗಿ ವಾಹಿನಿಯ ಧಾರಾವಾಹಿಯ ಪ್ರೋಮೋ ದೈವದಂತೆ ವೇಷ ಭೂಷಣ ಧರಿಸಿ ನಟನೆ ಮಾಡಲಾಗಿದೆ. ದೈವದ ಪಾತ್ರ ನಿರ್ವಹಿಸಿದ ಕಲಾವಿದನಿಗೆ ಸಾಮಾಜಿಕ ಜಾಲತಾಣದಲ್ಲೂ ಕ್ಲಾಸ್ ತೆಗೆದುಕೊಳ್ಳಲಾಗಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಯಾವುದೇ ಕಾರಣಕ್ಕೂ ಧಾರವಾಹಿ ತೆರೆ ಮೇಲೆ ಬರಬಾರದೆಂದು ಪಟ್ಟು ಹಿಡಿದಿರುವ ತುಳುನಾಡ ದೈವಾರಾಧೆ ಸಂರಕ್ಷಣಾ ಯುವ ವೇದಿಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೈವಕೋಲ ಕಟ್ಟುವ ಜನಾಂಗವು ಪರಿಶಿಷ್ಟ ವರ್ಗದವರು ಆಗಿರುವುದರಿಂದ ಸದರಿ ಆರೋಪಿಗಳ ವಿರುದ್ಧ ದಲಿತ ದೌರ್ಜ್ಯನ್ಯ ಪ್ರಕರಣ, ಜನಾಂಗೀಯ ನಿಂದನೆ ಜೊತೆ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅಪಚಾರಗಳನ್ನು ಅವಮಾನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ತುಳುನಾಡ ದೈವಾರಾಧೆ ಸಂರಕ್ಷಣಾ ಯುವ ವೇದಿಕೆಯವರು ಮಂಗಳೂರು ನಗರ ಕಮಿಷನರ್ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಧಾರಾವಾಹಿ ಪ್ರಸಾರವಾಗದಂತೆ ತಡೆಹಿಡಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ದೈವಾರಾಧನೆ ನಮ್ಮ ಸಮಾಜದ ಕರ್ತವ್ಯ. ಸೀಮಿತ ಸಮಾಜದವರು ಮಾತ್ರ ದೈವ ನರ್ತನ ಮಾಡಬೇಕು. ಈ ರೀತಿಯ ಘಟನೆಗಳಿಂದ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಸಾಂಪ್ರಾದಾಯಿಕವಾಗಿ ದೈವ ನರ್ತನ ಸೇವೆ ನಡೆಯುವಲ್ಲಿಯೇ ಅದು ನಡೆಯಬೇಕು. ಸಿನೆಮಾ, ಧಾರವಾಹಿ, ವೇದಿಕೆಗಳಲ್ಲಿ ದೈವಾರಾಧನೆ ಪ್ರದರ್ಶನ ಸಲ್ಲದು ಎಂದಿದ್ದಾರೆ. ಜೊತೆಗೆ ನಾವು ಆ ರೀತಿಯ ಪ್ರದರ್ಶನಗಳಿಗೆ ಅವಕಾಶ ನೀಡೋದಿಲ್ಲ. ಇದರ ವಿರುದ್ಧ ನಮ್ಮ ಸಂಘಟಿತರಾಗಿ ಹೋರಾಟ ನಡೆಸುತ್ತೇವೆ. ಸಿನೆಮಾ ಧಾರವಾಹಿ ಯಾವುದರಲ್ಲೂ ದೈವಾರಾಧನೆಯನ್ನ ಬಳಸಿಕೊಳ್ಳಬಾರದು. ಇದು ಇದು ನಮ್ಮ ಜನಾಂಗೀಯ ನಿಂದನೆ. ಮುಂದೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನ ನಡೆಸುತ್ತೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಹಾಸ್ಯ ಕಲಾವಿದ, ನಿರೂಪಕ ಪ್ರಶಾಂತ್ ಸಿಕೆ ಎನ್ನುವವರು ಕನ್ನಡ ಧಾರಾವಾಹಿ ಒಂದಕ್ಕೆ ದೈವದ ವೇಷಭೂಷಣ ತೊಟ್ಟು, ದೈವ ಕೋಲದ ಅನುಕರಣೆ ಮಾಡುವ ಮೂಲಕ ನಮ್ಮ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ವಾದ್ಯಕೋಶಗಳ ನುಡಿಸುವವರಿಗೆ ದೈವಸ್ಥಾನದಲ್ಲಿ ಕೋಲ ಇದೆ ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿರುತ್ತಾರೆ ಮತ್ತು ಇದೊಂದು ವರ್ಗವನ್ನು ಮೂಲೆ ಗುಂಪಾಗಿಸುವ ಪ್ರಯತ್ನವಾಗಿದೆ. ಜಾತಿನಿಂದನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!