ಉಪ್ಪಿನಂಗಡಿ: ಆ.09ರಂದು ಗೋಳಿತೊಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ತೀವ್ರ ಒತ್ತಡಕ್ಕೆ ಒಳಗಾಗಿ ಕುಸಿದು ಬಿದ್ದಿದ್ದ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರಾ ಅವರಿಗೆ ಗರ್ಭಪಾತವಾಗಿದ್ದು ಸದ್ಯಕ್ಕೆ ಅವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಗ್ರಾಮ ಸಭೆಯಲ್ಲಿ ವೈದ್ಯಾಧಿಕಾರಿಗೆ ಮಾನಸಿಕ ಒತ್ತಡ ಮತ್ತು ಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರ ವಿರುದ್ಧ ಇದೀಗ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ವೈದ್ಯರ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರು ಈ ಗ್ರಾಮಸಭೆಯಲ್ಲಿ ವೈದ್ಯಾಧಿಕಾರಿಗಳಿಂದ ಸ್ಪಷ್ಟನೆ ಬಯಸಿದ್ದರು.
ಈ ಸಂದರ್ಭದಲ್ಲಿ ಡೀಕಯ್ಯ ಪೂಜಾರಿ ಹಾಗೂ ಗಣೇಶ್ ಎಂಬವರು ಡಾ. ಶಿಶಿರಾ ಅವರನ್ನು ಪದೇ ಪದೇ ಪ್ರಶ್ನಿಸಿದ್ದರು.
ಈ ವೇಳೆ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸುತ್ತಲೇ ತೀವ್ರ ಒತ್ತಡಕ್ಕೆ ಒಳಗಾದ ಡಾ. ಶಿಶಿರಾ ಅವರು ಕುಸಿದುಬಿದ್ದಿದ್ದರು.
ಬಳಿಕ ಅವರಿಗೆ ಪ್ರಾಥಮಿಕ ಆರೈಕೆ ನೀಡಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭಿಣಿಯಾಗಿದ್ದ ಅವರಿಗೆ ಅಲ್ಲಿ ಗರ್ಭಪಾತವಾಗಿದೆ. ಬಳಿಕ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಸದ್ಯ ವೆಂಟಿಲೇಟರ್ ನಿಗಾದಲ್ಲಿದ್ದಾರೆ.
ಇದೀಗ ಡಾ. ಶಿಶಿರ ಅವರ ಈ ಪರಿಸ್ಥಿತಿಗೆ ಗ್ರಾಮಸಭೆಯಲ್ಲಿ ನಡೆದ ಅಂದಿನ ಘಟನೆಯೇ ಕಾರಣವೆಂದು ಆರೋಪಿಸಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಡೀಕಯ್ಯ ಹಾಗೂ ಗಣೇಶ್ ವಿರುದ್ಧ ದ.ಕ. ಜಿಲ್ಲಾ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘವು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದೆ.