ಉಡುಪಿ: ಸಂತೆಕಟ್ಟೆ ಸಮೀಪ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಡಿ.5 ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿ ಪ್ರವೀಣನನ್ನು ನ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದರು. ಈ ವೇಳೆ ಆರೋಪಿಯನ್ನು ನ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಪ್ರವೀಣ್ ನನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ತನಿಖೆ, ಮಹಜರು, ಹೇಳಿಕೆ, ಆರೋಪಿ ಗುರುತು ಸೇರಿದಂತೆ ಎಲ್ಲ ರೀತಿಯ ತನಿಖೆ ಪ್ರಕ್ರಿಯೆಯನ್ನು ವಾರದೊಳಗೆ ಪೂರ್ಣಗೊಳಿಸಿದ್ದಾರೆ.
ಇದೀಗ ಆರೋಪಿಯನ್ನು ನ.28ರವರೆಗೆ ಕಸ್ಟಡಿಯಲ್ಲಿ ಇಟ್ಟುಕೊಳ್ಳುವ ಅಗತ್ಯ ಇಲ್ಲ ಎಂಬುದನ್ನು ಮನಗಂಡ ಪೊಲೀಸರು, ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಡಿ.5ರಂದು ಮತ್ತೆ ಆರೋಪಿಯನ್ನು ನ್ಯಾಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಸ್ನ್ಯಾಪ್ ಚಾಟ್ ಬಳಸಿದನೇ ಪಾತಕಿ?
ಈ ನಡುವೆ ಆರೋಪಿ ಪ್ರವೀಣ್ ಈ ಮೊದಲು ಎಂದೂ ನೇಜಾರಿನ ಮನೆಗೆ ಬಂದಿರಲಿಲ್ಲ. ಕೊಲೆ ನಡೆಸಿದ ನ.12ರಂದೇ ಆತ ಮೊದಲ ಬಾರಿಗೆ ಬಂದದ್ದು. ಸ್ನ್ಯಾಪ್‌ಚಾಟ್ ಎಂಬ app ಬಳಸಿ ಮನೆಯನ್ನು ಕಂಡುಹಿಡಿದಿದ್ದ ಎಂಬೆಲ್ಲ ಅಂತೆಕಂತೆ ಸುದ್ದಿಗಳನ್ನು ತೇಲಿಬಿಡಲಾಗಿದೆ. ಈ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡದಿದ್ದರೂ ಬೇರೆ ಬೇರೆ ಮೂಲಗಳಿಂದ ಇಂಥ ಸುದ್ದಿಗಳು ಸೃಷ್ಟಿಯಾಗುತ್ತಿವೆ.