ಮಂಗಳೂರು: ನೇಜಾರಿನಲ್ಲಿ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರವೀಣ್ ಚೌಗಲೆಯನ್ನು ಪೊಲೀಸರು ನಿರಂತರವಾಗಿ ಮಹಜರು ಪ್ರಕ್ರಿಯೆಗೆ ಒಳಪಡಿಸಿದ್ದು, ಕೃತ್ಯಕ್ಕೆ ಬಳಸಿದ್ದ ಚಾಕು, ಮಾಸ್ಕ್, ಬ್ಯಾಗ್ ಸಹಿತ ಇತರ ವಸ್ತುಗಳು ಆತನ ಬಿಜೈಯ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿವೆ. ಬಿಜೈನಲ್ಲಿರುವ ಮೃತ ಯುವತಿ ಅಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಚೌಗಲೆ ಕಾರು ಖರೀದಿ ಮಾಡಿದ ಬಳಿಕ ತನ್ನಲ್ಲಿದ್ದ ಸ್ಕೂಟರ್ ಅನ್ನು ಸಹೋದ್ಯೋಗಿ ಅಯ್ನಾಝ್ಗೆ ಬಳಕೆ ಮಾಡಲು ನೀಡಿದ್ದ. ಆರೋಪಿ ಆಕೆಗೆ ಸ್ಕೂಟರ್ ಅನ್ನು ಮಾರಾಟ ಮಾಡಿದ್ದನೇ ಅಥವಾ ಉಪಯೋಗಿಸಲು ನೀಡದ್ದನೇ ಎಂಬುದನ್ನು ಪೊಲೀಸರು ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ
ಘಟನೆ ನಡೆದ ನೇಜಾರಿನ ಮನೆ, ಸಂತೆಕಟ್ಟೆ, ಕರಾವಳಿ ಬೈಪಾಸ್, ಹೆಜಮಾಡಿ, ಮೂಲ್ಕಿ ಭಾಗ, ಕೆಪಿಟಿ ಬಳಿಯಲ್ಲಿರುವ ಫ್ಲ್ಯಾಟ್, ಮಂಗಳೂರಿನಲ್ಲಿರುವ ಎರಡು ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆಯಲ್ಲಿ ತಪಾಸಣೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಆತ ಉಳಿದುಕೊಂಡಿದ್ದರಿಂದ ಆತನ ಊರಾದ ಮಹಾರಾಷ್ಟ್ರದ ಸಾಂಗ್ಲಿಗೆ ಕರೆದುಕೊಂಡು ಹೋಗುವ ಪ್ರಕ್ರಿಯೆ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.