Site icon newsroomkannada.com

ದಕ್ಷಿಣ ಕನ್ನಡದ ಗಡಿಭಾಗದ ಕಾಡಿನಂಚಿನ ಕೂಜಿಮಲೆಯಲ್ಲಿ ನಕ್ಸಲರು ಪ್ರತ್ಯಕ್ಷ

ಕೂಜಿಮಲೆಯ ದಿನಸಿ ಅಂಗಡಿಯೊಂದರಿಂದ 4 ಸಾವಿರ ರೂ.ಗಳಷ್ಟು ಬೆಲೆಯ ದಿನಸಿ ಖರೀದಿ

ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಕಾಡಿನಂಚಿನ ಗ್ರಾಮದಲ್ಲಿ ಸಶಸ್ತ್ರ ನಕ್ಸಲೀಯರು (Naxals in Karnataka) ಪ್ರತ್ಯಕ್ಷರಾಗಿದ್ದಾರೆ. ಇದರಿಂದ ಊರಿನ ಹಾಗೂ ಜಿಲ್ಲೆಯ ಜನ ಆತಂಕಿತರಾಗಿದ್ದಾರೆ. ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗಲು ಇವರು ತಯಾರಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಕಾಡಿನಂಚಿನ ಕೂಜಿಮಲೆ ಎಂಬಲ್ಲಿ ನಕ್ಸಲರು ಶನಿವಾರ ಸಂಜೆ ಪ್ರತ್ಯಕ್ಷರಾಗಿದ್ದಾರೆ. ಮಡಿಕೇರಿ ತಾಲೂಕು ಕಾಲೂರು ಗ್ರಾಮದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡ ಮಾವೋವಾದಿಗಳು, ಕೂಜಿಮಲೆಯ ದಿನಸಿ ಅಂಗಡಿಯೊಂದರಿಂದ 4 ಸಾವಿರ ರೂ.ಗಳಷ್ಟು ಬೆಲೆಯ ದಿನಸಿಯನ್ನು ಖರೀದಿಸಿದರು.

8 ಜನರಿದ್ದ ನಕ್ಸಲೀಯರ ತಂಡದವರು ನಗದು ನೀಡಿ ಸಾಮಗ್ರಿ ಖರೀದಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 6 ವರ್ಷದ ಬಳಿಕ ಮತ್ತೆ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷಗೊಂಡಿದ್ದಾರೆ. 2012ರಲ್ಲಿ ಇದೇ ಕಾಲೂರು ಗ್ರಾಮದಲ್ಲಿ ನಕ್ಸಲೀಯರು ಕಾಣಿಸಿಕೊಂಡಿದ್ದರು. 2018ರ ಫೆಬ್ರವರಿ ತಿಂಗಳಿನಲ್ಲಿ ಇಲ್ಲಿಗೆ ಸಮೀಪದ ಸಂಪಾಜೆ ಗುಡ್ಡೆಗದ್ದೆಯಲ್ಲಿ ಒಂದು ತಂಡ ಕಾಣಿಸಿಕೊಂಡಿತ್ತು.

ಕೊಡಗಿಗೆ ಸೇರಿರುವ ಕೂಜಿಮಲೆಗೆ ಸಮೀಪದಲ್ಲಿ ದಕ್ಷಿಣ ಕನ್ನಡದ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ಗ್ರಾಮಗಳಿವೆ. ಇಲ್ಲಿ ಬಹು ವಿಸ್ತಾರವಾದ ಕೂಜಿಮಲೆ ರಬ್ಬರ್ ಎಸ್ಟೇಟ್ ಇದೆ. ಇಲ್ಲಿನ ಕಾಡಿನಲ್ಲಿ ಎರಡು ದಶಕಗಳಿಗೆ ಹಿಂದೆ ಕೆಂಪು ಬಣ್ಣದ ಖನಿಜಗಲ್ಲು ನೆಲದಲ್ಲಿ ಕಾಣಿಸಿಕೊಂಡಿತ್ತು.

Exit mobile version