ಮಂಗಳೂರು: ಕರಾವಳಿಯ ಇತಿಹಾಸ ಪ್ರಸಿದ್ದ ಮಂಗಳಾದೇವಿಯ ಸನ್ನಿಧಿಯಲ್ಲಿ ಆರಂಭವಾದ ಧರ್ಮ ದಂಗಲ್ ಸದ್ಯ ತಣ್ಣಗಾಗಿದೆ. ಆದರೆ ನವರಾತ್ರಿ ಉತ್ಸವ ಆರಂಭವಾದ ಬೆನ್ನಲ್ಲೇ ವಿಶ್ವಹಿಂದೂ ಪರಿಷತ್ ಅಖಾಡಕ್ಕೆ ಇಳಿದಿದ್ದು, ದೇವಸ್ಥಾನದ ರಥಬೀದಿಯ ಹಿಂದೂ ವ್ಯಾಪಾರಿಗಳ ಪರ ಫೀಲ್ಡಿಗಿಳಿದಿದ್ದಾರೆ. ದೇವಸ್ಥಾನದ ಸಮೀಪ ಹಿಂದೂಗಳೇ ವ್ಯಾಪಾರ ಮಾಡಬೇಕು ಅಂತ ಆಗ್ರಹಿಸಿ ಭಗವಾಧ್ಬಜ ಅಭಿಯಾನ ಆರಂಭಿಸಿದ್ದಾರೆ. ಕಳೆದೊಂದು ವಾರದಿಂದ ಭಾರೀ ಸದ್ದು ಮಾಡಿದ್ದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವ್ಯಾಪಾರಿ ಧರ್ಮ ದಂಗಲ್ ಸದ್ಯ ತಣ್ಣಗಾಗಿದೆ. ಎರಡು ಬಣಗಳ ಗುದ್ದಾಟದ ಮಧ್ಯೆ ದ.ಕ ಜಿಲ್ಲಾಡಳಿತ ಮಧ್ಯ ಪ್ರವೇಶದ ಬಳಿಕ ಬಹುತೇಕ ಎಲ್ಲವೂ ನಿರಾಳವಾಗಿ ಸದ್ಯ ನವರಾತ್ರಿ ಹಬ್ಬದ ವ್ಯಾಪಾರ ಮಂಗಳಾದೇವಿಯಲ್ಲಿ ಆರಂಭವಾಗಿದೆ.
ಆದರೆ ಇದೀಗ ವ್ಯಾಪಾರ ಶುರುವಾಗ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಅಖಾಡಕ್ಕೆ ಇಳಿದಿದ್ದು, ಹಿಂದೂ ವ್ಯಾಪಾರಿಗಳ ಪರ ಮಂಗಳಾದೇವಿಯಲ್ಲಿ ಅಭಿಯಾನ ಆರಂಭಿಸಿದೆ. ವಿವಾದ ತಣ್ಣಗಾದ ಬೆನ್ನಲ್ಲೇ ಮತ್ತೆ ಅಖಾಡಕ್ಕಿಳಿದ ವಿಶ್ವ ಹಿಂದೂ ಪರಿಷತ್, ಮಂಗಳಾದೇವಿ ದೇವಸ್ಥಾನದ ಹಿಂದೂ ವ್ಯಾಪಾರಿಗಳ ಪರ ಬ್ಯಾಟಿಂಗ್ ಆರಂಭಿಸಿದೆ. ದೇವಸ್ಥಾನದ ರಥಬೀದಿಯ ಹಿಂದೂ ವ್ಯಾಪಾರಿಗಳ ಸ್ಟಾಲ್ ಗಳಿಗೆ ವಿಎಚ್ ಪಿ ನಾಯಕರು ಭೇಟಿ ನೀಡಿದ್ದು, ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹಾಗೂ ನಾಯಕರು ಭೇಟಿ ನೀಡಿದ್ದಾರೆ. ಹಿಂದೂಗಳ ಸ್ಟಾಲ್ ಗಳಿಗೆ ಭಗವಾಧ್ಬಜ ವಿತರಿಸಿದ ವಿಎಚ್ ಪಿ ನಾಯಕರು, ಸ್ಟಾಲ್ ಗಳ ಮುಂಭಾಗ ಭಗವಾಧ್ವಜ ಕಟ್ಟಿದ್ದಾರೆ.