newsroomkannada.com

ನಾಟ್ಯಾರಾಧನಾ ಕಲಾ ಕೇಂದ್ರಕ್ಕೆ ತ್ರಿಂಶೋತ್ಸವ ಸಂಭ್ರಮ

ಮಂಗಳೂರು: ನಾಟ್ಯಾರಾಧನಾ ಕಲಾ ಕೇಂದ್ರದ ‘ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭ ಜ.18ರಂದು ಸಾಯಂಕಾಲ 4.45ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ನಾಟ್ಯಾರಾಧನಾ ವಿಂಶತಿ ಸಮಿತಿ ಅಧ್ಯಕ್ಷ ಡಾ. ಗಣೇಶ್‌ ಅಮೀನ್‌ ಸಂಕಮಾರ್‌ ತಿಳಿಸಿದರು.

ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಬೆಂಬಲದೊಂದಿಗೆ ಇದೇ ಬರುವ ಜನವರಿ 18, ಗುರುವಾರ ಸಂಜೆ 4.45 ಮಂಗಳೂರು ಪುರಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭ’ವನ್ನು ಆಯೋಜಿಸಿದೆ ಎಂದು ವಿವರಿಸಿದರು.

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು(ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ-ಶ್ರೀ ಎಡನೀರು ಮಠ) ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭರತನಾಟ್ಯ ಗುರುಗಳೂ ವಿದ್ವಾಂಸರೂ ಆದ ಗುರು ಉಳ್ಳಾಲ ಮೋಹನ್ ಕುಮಾರ್, ವಿಚಂದ್ರಶೇಖರ ನಾವಡ, ಸುರತ್ಕಲ್, ವಿ. ಶಾರದಾಮಣಿ ಶೇಖರ್, ವಿ||ಗೀತಾ ಸರಳಾಯ,ಕದ್ರಿ, ವಿಕಾವ್ಯ ಭಟ್, ಪೆರ್ಲ ಇವರು ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಖ್ಯಾತ ಜನಪದ ವಿದ್ವಾಂಸರು, ನಾಟ್ಯಾರಾಧನಾ ವಿಂಶತಿ ಸಮಿತಿಯ ಅಧ್ಯಕ್ಷರಾಗಿರುವ ಡಾ. ಗಣೇಶ್ ಅಮೀನ್ ಸಂಕರ್ಮಾ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಸಂಜೆ 5.30 ಯಿಂದ 7.30 ರವರೆಗೆ ನಾಟ್ಯಾರಾಧನಾ ಕಲಾ ಕೇಂದ್ರದ ಅರಳು ಪ್ರತಿಭೆಗಳಾದ ವಿ. ಶೋಧನ್ ಕುಮಾರ್ ಬಿ, ವಿ|| ಸತ್ಯನುಶ್ರೀ ಗುರುರಾಜ್, ಜಾಹ್ನವಿ ಶೆಟ್ಟಿ, ಸಾಧೀ ರಾವ್ ಟಿ, ವೃಂದಾ ಜಿ ರಾವ್, ಸಮನ್ವಿತಾ ರಾವ್, ಧರಿತ್ರೀ ಭಿಡೆ, ತನ್ವಿ ಪಿ ಬೋಳೂರು ಇವರಿಂದ ಗುರು ಸುಮಂಗಲಾ ರತ್ನಾಕರ್ ರಾವ್ ನಿರ್ದೇಶನದಲ್ಲಿ “ ನೃತ್ಯ ವಂದನಾ” ಕಾರ್ಯಕ್ರಮ ಜರುಗಲಿದೆ.

ಸಂಸ್ಥೆಯ ಇತಿಹಾಸದ ಕುರಿತು: ಭರತನಾಟ್ಯ ಕಲೆಯನ್ನು ಅಕಾಡೆಮಿಕ್ ಆಗಿ ಬೋಧಿಸುತ್ತಿರುವ ಕಲಾ ಸಂಸ್ಥೆಗಳಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರ (ಟ್ರಸ್ಟ್) ರಿ. ಉರ್ವ ಮಾರ್ಕೆಟ್ ಸಂಸ್ಥೆಯು ಪ್ರಮುಖವಾದದ್ದು. ಸಂಸ್ಥೆಯು 1994 ಸೆಪ್ಟೆಂಬರ್ 8 ರಂದು ಸುರತ್ಕಲ್ ಕೆ.ಆರ್.ಇ.ಸಿ.ಯಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಕನಸಿನ ಕೂಸಾಗಿ ಆರಂಭವಾಗಿದ್ದು, ಇದೀಗ ನಾಟ್ಯಾರಾಧನಾಕ್ಕೆ 30 ನೇ ವರ್ಷಾಚರಣೆಯ ಸಂಭ್ರಮ.
ಸುದ್ದಿಗೋಷ್ಠಿಯಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಡಾ.ಗಣೇಶ್ ಅಮೀನ್ ಸಂಕಮಾ‌ರ್ (ಅಧ್ಯಕ್ಷರು) ವಿ. ಸುಮಂಗಲಾ ರತ್ನಾಕರ್ ರಾವ್ (ಕಾರ್ಯದರ್ಶಿ) ಬಿ ರತ್ನಾಕರ ರಾವ್ (ಕೋಶಾಧಿಕಾರಿ) ಶಶಿರಾಜ ರಾವ್ (ಸಂಘಟನಾ ಕಾರ್ಯದರ್ಶಿ) ಉಪಸ್ಥಿತರಿದ್ದರು.

Exit mobile version