ಶಿವಮೊಗ್ಗ: ಮಲೆನಾಡು, ಕರಾವಳಿಯಲ್ಲಿ ಅಡಿಕೆ ಕೃಷಿಯೇ ಜನರ ಜೀವಾಳ ಇಲ್ಲಿನ ಆರ್ಥಿಕತೆ ಅಡಿಕೆಯ ಭದ್ರ ತಳಪಾಯದ ಮೇಲೆಯೇ ನಿಂತಿದೆ. ಇಂತಹ ಅಡಿಕೆ ಉಪ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ಮೂಲಕ ಶಿವಮೊಗ್ಗದ ಉದ್ಯಮಿಯೊಬ್ಬರು ಜಗಮೆಚ್ಚಿದ ಸಾಧನೆ ಮಾಡಿದ್ದಾರೆ.
ಹೌದು ಶಿವಮೊಗ್ಗದ ಉದ್ಯಮಿ ಸುರೇಶ್ ಮತ್ತು ಮೈಥಿಲಿ ದಂಪತಿ 2019ರಲ್ಲಿ ಆರಂಭಿಸಿದ ಭೂಮಿ ಅಗ್ರಿ ವೆಂಚರ್ಸ್ ನೈಸರ್ಗಿಕ ಚರ್ಮ ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳ ತಯಾರಿ ಮೂಲಕ ಪ್ರತಿ ಅಡಕೆ ಕೃಷಿಕ, ಯುವಕರಿಗೆ ಮಾದರಿಯಾಗಿ ಮೂಡಿ ಬಂದಿದ್ದಾರೆ.
ಏನಿದು ಸಾವಯವ ಚರ್ಮ: ಇದೇನಿದು ಸಾವಯವ ಚರ್ಮ ಹೆಸರೇ ವಿಚಿತ್ರವಾಗಿದೆ ಅಲ್ಲ. ಅದನ್ನು ಯಾವುದರಿಂದ ಮಾಡ್ತಾರೆ ಅನ್ನುವ ಕುತೂಹಲ ನಿಮ್ಮಲ್ಲಿರಬಹುದು. ನಾವೆಲ್ಲ ಸಾಮಾನ್ಯವಾಗಿ ಉಪಯೋಗಿಸುವ ದುಬಾರಿ ಬ್ಯಾಗ್, ಬೆಲ್ಟ್, ವಾಚ್ ನ ಬೆಲ್ಟ್ ಸೇರಿದಂತೆ ಹಲವು ಉತ್ಪನ್ನಗಳು ಪ್ರಾಣಿಗಳ ಚರ್ಮದಿಂದ ತಯಾರಿಗಿರುತ್ತದೆ. ಆದರೆ ಶಿವಮೊಗ್ಗದ ಭೂಮಿ ವೆಂಚರ್ಸ್ ಸಂಸ್ಥೆಯವರು ಸಸ್ಯ ಮೂಲ ಅದರಲ್ಲಿಯೂ ಮಲೆನಾಡು, ಕರಾವಳಿಯ ಜೀವನಾಡಿಯಾಗಿರುವ ಅಡಕೆಯ ಉಪ ಉತ್ಪನ್ನ ಅಡಿಕೆ ಸಿಪ್ಪೆ, ಮತ್ತು ಅಡಕೆ ಹಾಳೆ ಮತ್ತು ರಬ್ಬರ್ ಬಳಸಿ ಚರ್ಮ ತಯಾರಿ ಮೂಲಕ ಕೃಷಿಕರ ಮನಗೆದ್ದಿದ್ದಾರೆ. ಇಂತಹ ಯುವ ಸಾಹಸಿ ಉದ್ಯಮಿ ಸುರೇಶ್ ಅವರ ಉದ್ಯಮ ಸಾಹಸದ ಕುರಿತ ಕಿರು ಪರಿಚಯ ಇಲ್ಲಿದೆ.
ಸಸ್ಯಜನ್ಯ ಅಥವಾ ಪಾಮ್ ಲೆದರ್ ಅಂದ್ರೇನು: ವೀಗನ್ ಲೆದರ್ ಅಂದರೆ ಸಸ್ಯ ಜನ್ಯ ಲೆದರ್. ಇಂತಹ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಪೈನಾಪಲ್, ಮಾವಿನ ಉತ್ಪನ್ನದಿಂದ ಮಾಡಲಾದ ಚರ್ಮದ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆವೆ. ಆದರೆ ಅಡಿಕೆ ಸಿಪ್ಪೆಯಿಂದ ಫೈಬರ್ ಎಕ್ಟ್ರಾಕ್ಟ್ ಮಾಡಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಚರ್ಮದ ಉತ್ಪನ್ನಗಳನ್ನು ತಯಾರಿ ಮಾಡಲಾಗಿದೆ. ಇದು ನೂರಕ್ಕೆ ನೂರು ಬಯೋಡೀಗ್ರೇಡಬಲ್ ಉತ್ಪನ್ನ ಆಗಿದ್ದು. ಈ ಉತ್ಪನ್ನದಲ್ಲಿ ಅಡಕೆ ಬೆಳಗಾರರ ಹಿತದೊಂದಿಗೆ ರಬ್ಬರ್ ಬೆಳೆಗಾರರ ಹಿತವೂ ಅಡಗಿದೆ. ಹೇಗೆಂದರೆ ಈ ಉತ್ಪನ್ನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ರಬ್ಬರ್ ಅನ್ನು ಮಿಶ್ರಣ ಮಾಡಲಾಗಿದೆ. ಈ ಉತ್ಪನ್ನಕ್ಕೆ ಕೊಲ್ಕತ್ತಾ ಐಸಿಆರ್ ನ ಮಾರ್ಗದರ್ಶನ ಮತ್ತು ನೆರವು ಇದೆ. ಪ್ರಸ್ತುತ ಈ ಉತ್ಪನ್ನದ ದಪ್ಪ ಕಡಿಮೆಯಿದ್ದು ಕೈಗಾರಿಕಾ ಕ್ಷೇತ್ರದಲ್ಲಿ ಬಳಕೆಯಾಗುವ ಚರ್ಮದ ದಪ್ಪಕ್ಕೆ ನಾವು ಈ ಚರ್ಮವನ್ನು ತರಬೇಕಿದೆ. ಅಂದರೆ ಕಾರು ಮತ್ತು ಬೈಕ್ ಸೀಟ್ಗಳಲ್ಲಿ ಬಳಕೆಯಾಗುವ ಚರ್ಮದ ಹೊದಿಕೆಯಷ್ಟು ದಪ್ಪದ ಚರ್ಮ ತಯಾರಿ ಪ್ರಯತ್ನ ನಡೆದಿದೆ. ಇನ್ನೊಂದರೆಡು ತಿಂಗಳಿನಲ್ಲಿ ಇಂಡಸ್ಟ್ರಿ ಬಳಕೆಯ ಚರ್ಮದ ಸಂಶೋಧನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸುರೇಶ್ ಹೇಳುತ್ತಾರೆ.
ಅಡಕೆ ಹಾಳೆ ರಬ್ಬರ್ ನಂತಾಗುವುದು ಹೇಗೆ ಗೊತ್ತಾ: ಅಡಕೆ ಹಾಳೆಯನ್ನು ಜೈವಿಕ ದ್ರಾವಣದಲ್ಲಿ ಮುಳುಗಿಸಿ ತೆಗೆಯುವುದರಿಂದ ಅದರಿಂದ ಹಾಳೆ ಮೃದುವಾಗುತ್ತದೆ. ಸಾಮಾನ್ಯವಾಗಿ ಅಡಕೆ ಹಾಳೆ ಹಪ್ಪಳದಂತೆ ಮುರಿಯುತ್ತದೆ. ಆದರೆ ಆ ದ್ರಾವಣದಲ್ಲಿ ಮೂರುದಿನಗಳ ಕಾಲ ಅದ್ದಿ ಇಟ್ಟ ಕಾರಣ ಮೃದು ಸ್ಥಿತಿಗೆ ತಲುಪುತ್ತದೆ.
ಸುರೇಶ್ ಮೂಲತಃ ಎಲ್ಲಿಯವರು: ಸುರೇಶ್ ಮೂಲಃ ಶೃಂಗೇರಿ ಸಮೀಪದ ಸುಂಕರಡಿಯವರು ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಸುರೇಶ್ ತಮ್ಮ ಪದವಿ ಶಿಕ್ಷಣವನ್ನು ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಬಳಿಕ ಮಣಿಪಾಲದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮೋ ಪದವಿ ಪೂರೈಸಿದರು. ನಂತರ ಶಿವಮೊಗ್ಗದಲ್ಲಿಯೇ ಅಧಿತಿ ಕಂಪ್ಯೂಟರ್ಸ್ ಸಂಸ್ಥೆ ಹುಟ್ಟುಹಾಕಿದರು. ಈ ಸಂಸ್ಥೆ ಬ್ಯಾಂಕ್ ಗಳಲ್ಲಿ ನುಡಿ ಸಾಫ್ಟ್‌ವೇರ್ ಅಳವಡಿಕೆ ಮಾಡುವ ಮಹತ್ತರ ಕಾರ್ಯ ಕೆಲಸ ನಿರ್ವಹಿಸಿತು. ಈ ಸಂಸ್ಥೆಯ ಮೂಲಕವೇ ರಾಯಚೂರು, ಅಥಣಿ ಸೇರಿದಂತೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವು ಪ್ರದೇಶಗಳ ಬ್ಯಾಂಕ್ ಗಳಲ್ಲಿ ಸಾಫ್ಟ್ ವೇರ್ ಅಳವಡಿಕೆ ಮಾಡಲಾಗಿದೆ. ನಂತರ 2004ರಲ್ಲಿ ಶಿವಮೊಗ್ಗದಲ್ಲಿ ಮೈನಾ ಟೆಕ್ನಾಲಜಿಸ್ ಸಂಸ್ಥೆ ಬಿಪಿಒ ಮೂಲಕ ಹಲವಾರು ಮಂದಿಗೆ ಉದ್ಯೋಗ ನೀಡುವ ಕಾರ್ಯ ಮಾಡಿದರು.
ಹಳದಿ ರೋಗ, ಗ್ರಾಮೀಣರಿಗೆ ಸಹಾಯ ಮಾಡುವ ತುಡಿತ ಸಾಧನೆಗೆ ಪ್ರೇರಣೆ: ಸುರೇಶ್ ಅವರಿಗೆ ಮೊದಲಿಂದಲೂ ಗ್ರಾಮೀಣ ಪ್ರದೇಶದ ಯುವಕರು ಸ್ವಾವಲಂಬಿಯಾಗಬೇಕು ಎಂಬ ತುಡಿತವಿತ್ತು. ಅಲ್ಲದೆ ಮಲೆನಾಡು ಭಾಗದಲ್ಲಿ ಅಡಕೆಗೆ ತೀವ್ರವಾಗಿ ಕಾಡಿರುವ ಮತ್ತು ಕಾಡುತ್ತಿರುವ ಹಳದಿ ರೋಗ ಬಾಧೆಯ ಸಂಪೂರ್ಣ ಅರಿವಿತ್ತು. ಸುರೇಶ್ ಅವರ ಅಡಿಕೆ ತೋಟವೂ ಈ ಮಹಾಮಾರಿ ತುತ್ತಾಗಿ
ನೆಲಕಚ್ಚಿತ್ತು. ಇದೇ ಕಾರಣದಿಂದ ಅಡಕೆ ಕೃಷಿಕರಿಗೆ ನೆರವಾಗುವ ಉದ್ದೇಶದಿಂದಲೇ ಭೂಮಿ ವೆಂಚರ್ಸ್ ಸಂಸ್ಥೆ ಹುಟ್ಟುಹಾಕಿದರು.
ಸುರೇಶ್ ಮಾಲೀಕತ್ವದ ಭೂಮಿ ಸಂಸ್ಥೆಯಲ್ಲಿ ಕೇವಲ ಮೂರೇ ಜನರಿದ್ದಾರೆ. ಆದರೆ ಹಲವಾರು ಗ್ರಾಮೀಣ ಮಹಿಳೆಯರಿಗೆ ಇವರು ಉದ್ಯೋಗ ದಾತರಾಗಿದ್ದಾರೆ. ಅಂದರೆ ನೀವು ನಂಬಲೇಬೇಕು. ಅದೇ ಹೇಗೆ ಅಂತೀರಾ. ಇವರು ಅಡಕೆ ಹಾಳೆಯಿಂದ ಚಪ್ಪಲಿ ಸೇರಿದಂತೆ ಹಲವು ಉತ್ಪನ್ನಳನ್ನು ತಯಾರಿಸುತ್ತಾರೆ. ಅಡಕೆ ಹಾಳೆಯನ್ನು ಚಪ್ಪಲಿ ಆಕಾರಕ್ಕೆ ಕತ್ತರಿಸಿ ಅದನ್ನು ಸ್ವಸಹಾಯ ಗುಂಪಿನ ಮಹಿಳೆಯರಿಗೆ ಪೂರೈಕೆ ಮಾಡುತ್ತಾರೆ. ಆ ಮಹಿಳೆಯರು ಅದನ್ನು ಸ್ಟಿಚ್ ಮಾಡಿ ಸಿದ್ದ ಉತ್ಪನ್ನಗಳನ್ನು ತಯಾರಿ ಮಾಡುತ್ತಾರೆ. ಅದೇ ರೀತಿ ಬ್ಯಾಗ್ ಸೇರಿದಂತೆ ತರಹೇವಾರಿ ಉತ್ಪನ್ನಗಳು ಗ್ರಾಮೀಣ ಮಹಿಳೆಯರಿಂದಲೇ ಸಿದ್ಧವಾಗುತ್ತವೆ.
ಮೋದಿ ಮನ್ ಕಿ ಬಾತ್ ನಲ್ಲಿ ಪ್ರಶಂಸೆ: 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುರೇಶ್ ಸಾಧನೆಯ ಸಾಹಸಗಾಥೆ ಮಚ್ಚಿ ಮನಸಾರೆ ಹೊಗಳಿದ್ದರು. ಇಂತಹ ಸಾಧಕರು ಪ್ರತಿ ಗ್ರಾಮೀಣರು, ಯುವಕರಿಗೆ ಸ್ಫೂರ್ತಿ ಎಂದು ಹೇಳಿದ್ದರು.
ಯಾವೆಲ್ಲ ಉತ್ಪನ್ನಗಳು: ಭೂಮಿ ಅಗ್ರಿ ವೆಂಚರ್ಸ್ ನೈಸರ್ಗಿಕ ರೀತಿಯಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ಬಳಸದೇ ವಿವಿಧ ಉತ್ಪನ್ನಗಳನ್ನು ಹೊರತಂದಿದೆ. ಜರ್ನಲ್ ಪುಸ್ತಕಗಳಿಗೆ ಕವರ್ ಶೀಟ್, ತಾಳೆ ಹೊದಿಕೆಯ ನೆಲದ ಚಾಪೆಗಳು (ದೊಡ್ಡ ಮತ್ತು ಸಣ್ಣ ಗಾತ್ರಗಳು), ಹೈ ಎಂಡ್ ಹೋಟೆಲ್ ಮತ್ತು ರೆಸಾರ್ಟ್ಗಳಿಗೆ ಪ್ರೀಮಿಯಂ ಗುಣಮಟ್ಟದ ಚಪ್ಪಲಿಗಳು, ಲ್ಯಾಂಪ್ ಶೇಡ್ಗಳು, ಹೈ-ಸ್ಟ್ರೀಟ್ ಹ್ಯಾಂಡ್ ಬ್ಯಾಗ್ಗಳು ಮತ್ತು ಕ್ಲಚ್ಗಳು (ವಿವಿಧ ಗಾತ್ರಗಳು ಮತ್ತು ಬಣ್ಣಗಳು) ಮತ್ತು ಪೆನ್ ಸ್ಟ್ಯಾಂಡ್ ಇತ್ಯಾದಿಗಳನ್ನು ಹೊರತಂದಿದ್ದು, ವಿವಿಧ ದೇಶಗಳಿಗೆ ಉತ್ಪನ್ನಗಳು ರಫ್ತಾಗುತ್ತಿವೆ.
ಭಾರತದ ಉತ್ಪನ್ನ ನೆದರ್ಲ್ಯಾಂಡ್ ಸಂಶೋಧಕರ ನೆರವು: ಭೂಮಿ ವೆಂಚರ್ಸ್‌ನ ಹೆಚ್ಚಿನ ಉತ್ಪನ್ನಗಳು ರಫ್ತಾಗುತ್ತಿರುವುದು ನೆದರಲ್ಯಾಂಡ್ ಗೆ ಅಲ್ಲಿನ ಜನರು ಪರಿಸರಕ್ಕೆ ಭಾರತದ ಪೂರ್ವಿಕರಂತೆ ಪರಿಸರಕ್ಕೆ ಪೂರಕವಾಗಿ ಹೊಂದಿಕೊಂಡು ಬಾಳುವ ಮನೋಭಾವದವರು. ಅಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಸೇರಿದಂತೆ ಹೆಚ್ಚಿನ ಎಲ್ಲ ಕೆಲಸಗಳಿಗೆ ಪೆಟ್ರೋಲ್ ವಾಹನಗಳ ಬದಲಿಗೆ ಸೈಕಲ್ ಸೇರಿದಂತೆ ಕಾರ್ಬನ್ ಮುಕ್ತ ಇಕೋ ಫ್ರೆಂಡ್ಲಿ ವಾಹನಗಳನ್ನೇ ಅತಿ ಹೆಚ್ಚು ಬಳಕೆ ಮಾಡುತ್ತಾರೆ. ಹೀಗಾಗಿಯೇ ಭೂಮಿ ವೆಂಚರ್ಸ್ ಉತ್ಪನ್ನಗಳಿಗೆ ಅಲ್ಲಿ ಹೆಚ್ಚಿನ ಬೇಡಿಕೆ ಇದೆ. ಅದೇ ರೀತಿ ನೆದರ್ ಲ್ಯಂಡ್ ನ ಜೇಡ್ ವೆನೊಹನ್ ಎಂಬುವರು ಹಲವು ವರ್ಷಗಳ ಹಿಂದೆಯೇ ಅಡಿಕೆ ಬೆಳೆ ಪ್ರದೇಶಗಳಲ್ಲಿ ಸಂಶೋಧನೆ ನಡೆಸಿ ಅಡಕೆ ಹಾಳೆ, ಅಡಿಕೆ ಸಿಪ್ಪೆಯಿಂದ ಲೆದರ್ (ಚರ್ಮ ಉತ್ಪನ್ನ) ತಯಾರಿಗೆ ಮುಂದಾಗಿದ್ದರು. ಆದರೆ ಇಲ್ಲಿನ ಪ್ರದೇಶ ಮತ್ತು ಉತ್ಪನ್ನಗಳ ಪರಿಚಯ, ಮಾಹಿತಿ ಕೊರತೆಯಿಂದ ಸಿದ್ಧ ಉತ್ಪನ್ನ ತಯಾರಿ ಆ ವೇಳೆ ಸಾಧ್ಯವಾಗಿರಲಿಲ್ಲ. ಇದೀಗ ಸುರೇಶ್ ಅವರಿಗೆ ಅವರು ಬೆನ್ನೆಲುಬಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರು ಚರ್ಮದ ಉತ್ಪನ್ನಗಳ ತಯಾರಿಗೆ ಬಹುದೊಡ್ಡ ನೆರವು ಅವರ ಕಡೆಯಿಂದ ದೊರೆಯುತ್ತಿದೆ.
ಜೇಡ್ ಅವರು ನೆದರ್ ಲ್ಯಾಂಡ್ ನಲ್ಲಿ ಕೆಲವು ನಿರ್ದಿಷ್ಟ ಗಿಡಗಳಿಂದ ಇಟ್ಟಿಗೆ ತಯಾರಿ, ಹೂವುಗಳಿಂದ ಬಣ್ಣ ತಯಾರಿಯನ್ನು ಕೂಡ ನಡೆಸುತ್ತಿದ್ದು, ಪೂರ್ಣ ಪ್ರಮಾಣದ ಯಶಸ್ಸು ಕಂಡು ಸಿದ್ಧ ಉತ್ಪನ್ನಗಳು ತಯಾರಾಗುತ್ತಿವೆ. ಇಂತಹ ಜೇಡ್ ಅವರು ನಮ್ಮ ಸಂಶೋಧನೆಗೆ ನೆರವಾಗುತ್ತಿರುವುದು ತುಂಬಾ ಖುಷಿ, ವಿಚಾರ ಎನ್ನುತ್ತಾರೆ ಸುರೇಶ್.
ಈ ಹಿಂದೆ ಸುರೇಶ್ ಅವರ ಭೂಮಿ ಅಗ್ರಿ ವೆಂಚರ್ಸ್ ಸಂಸ್ಥೆ ಪಾಮ್ ಲೆದರ್ (ಪರ್ಯಾಯ ಚರ್ಮ- ಪ್ರಾಣಿ ಮೂಲದ್ದಲ್ಲ ಬದಲಿಗೆ ಸಸ್ಯಮೂಲದ್ದು) ಅಭಿವೃದ್ಧಿಪಡಿಸಿತ್ತು. ಪಾಮ್ ಲೆದರ್ ಸಾಂಪ್ರದಾಯಿಕ ಚರ್ಮಕ್ಕೆ ಉತ್ತಮ ಪರ್ಯಾಯ ಉತ್ಪನ್ನವಾಗಿತ್ತು. ಆದರೆ ಇದರಲ್ಲಿ ಕೆಲ ಸಮಸ್ಯೆಗಳಿತ್ತು. ಹಳೆಯ ಮಾದರಿಯ ಪಾಮ್ ಲೆದರ್ ಗಾತ್ರ ಚಿಕ್ಕದಾಗಿತ್ತು. ಇದು ಸಿದ್ಧ ಉತ್ಪನ್ನಗಳ ತಯಾರಿಯಲ್ಲಿ ಸಮಸ್ಯೆಗೆ ಕಾರಣವಾಗಿತ್ತು. ಆದರೆ ಪ್ರಸ್ತುತ ಸಂಶೋಧನೆ ನಡೆಸಿ ಉತ್ತಮ ದರ್ಜೆಯ ವಿವಿಧ ಉತ್ಪನ್ನಗಳ ತಯಾರಿಗೆ ಪೂರಕವಾದ ಲೆದರ್ ಅನ್ನು ತಯಾರಿ ಮಾಡಿದ್ದಾರೆ.
ಪ್ರಾಣಿ ಮೂಲದ ಚರ್ಮ ಮನುಕಲಕ್ಕೆ ಅಪಾಯ: ಪ್ರಾಣಿಮೂಲದಿಂದ ನಾವು ಈಗ ಯತೇಚ್ಛವಾಗಿ ಬಳಕೆ ಮಾಡುತ್ತಿರುವ ಚರ್ಮದ ಉತ್ಪನ್ನಗಳು ಪರಿಸರಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಾಣಿಮೂಲದ ಚರ್ಮ ತಯಾರಿ ವೇಳೆ ಅತಿಹೆಚ್ಚಿನ ಇಂಗಾಲಾಮ್ಲ ಬಿಡುಗಡೆಯಾಗುತ್ತದೆ. ಅದೇ ರೀತಿ ಪ್ರಾಣಿಹಿಂಸೆಯೂ ಕೂಡ ನಡೆಯುತ್ತದೆ. ಪ್ರಾಣಿ ಮೂಲದ ಚರ್ಮ ತಯಾರಿಗೆ ನೀರಿನ ಬೇಡಿಕೆ ಅತಿಹೆಚ್ಚು ಆದರೆ ಪಾಮ್ ಲೆದರ್ ತಯಾರಿ ವೇಳೆ ನೀರು ಸ್ವಲ್ಪವೇ ಸಾಕಾಗುತ್ತದೆ. ಇದೆಲ್ಲ ಕಾರಣದಿಂದ ಪಾಮ್ ಲೆದರ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಮಾಲ್ ಮಾಡಲಿದೆ ಎಂಬುದು ಸುಳ್ಳಲ್ಲ.
5 ಗಂಟೆಯಲ್ಲಿ 750 ರೂ. ದುಡಿಮೆ: ಹಳ್ಳಿಗಳಿಂದ ಜನರು ವಲಸೆಹೋಗುವುದು ತಡೆಯಬೇಕು. ಹಳ್ಳಿಯ ಹೆಣ್ಣುಮಕ್ಕಳಿಗೆ ಮನೆಯಂಗಳದಲ್ಲಿಯೇ ಕೆಲಸ ದೊರೆಯುವಂತಾಗಬೇಕು ಎಂಬುದು ನನ್ನ ಉದ್ದೇಶ. ಇದಕ್ಕಾಗಿಯೇ ಹಳ್ಳಿಗಾಡಿನಲ್ಲಿರುವ ಸ್ವಸಹಾಯ ಸಂಘದ ಮಹಿಳೆಯರಿಗೆ ಚಪ್ಪಲಿ, ಬ್ಯಾಗ್ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಗೆ ಮೂಲ ವಸ್ತುಗಳನ್ನು ಒದಗಿಸುತ್ತೇನೆ. ಉದಾಹರಣೆಗೆ ಒಂದು ಚಪ್ಪಲಿ ಸ್ಟಿಚ್ ಮಾಡಲು 15 ರೂ., ಗಳನ್ನು ನೀಡುತ್ತೇನೆ. ಓರ್ವ ಮಹಿಳೆ ಐದುಗಂಟೆಗಳಲ್ಲಿ 50 ಜೊತೆ ಚಪ್ಪಲಿಗಳನ್ನು ತಯಾರಿಸಿ ಕೊಡುತ್ತಾರೆ. ಆ ಮೂಲಕ 5 ಗಂಟೆಯಲ್ಲಿ 750 ರೂ.ಗ:ಳನ್ನು ಗಳಿಕೆ ಮಾಡುತ್ತಾರೆ. ಇಂತಹ ಉತ್ಪನ್ನ ತಯಾರಿಗೆ ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡುತ್ತಿಲ್ಲ ಎನ್ನುತ್ತಾರೆ ಸುರೇಶ್
ದುಬೈನಲ್ಲಿ ಕಮಾಲ್ ಮಾಡಿದೆ ಅಡಿಕೆ ಉತ್ಪನ್ನ: ದುಬೈನ ಅಡಿಟೊರಿಯಂ ಒಂದರಲ್ಲಿ ಪ್ರತಿಧ್ವನಿ ಜೋರಾಗಿ ಹೊಮ್ಮುವ ಸಮಸ್ಯೆ ಬಹುವಾಗಿ ಕಾಡುತ್ತಿತ್ತು. ಅಲ್ಲಿನ ಗೋಡೆಗಳಿಗೆ ಇವರು ಒದಗಿಸಿದ ಮ್ಯಾಟ್‌ಗಳನ್ನು ಅಳವಡಿಸಿದ್ದು, ಇದೀಗ ಅಲ್ಲಿ ಸಮಸ್ಯೆಗೆ ಪರಿಹಾರ ಒದಗಿದೆ.
ರಫ್ತಾರ್ ಯುವ ಕೃಷಿಕರಿಗೆ ಪ್ರೇರಣೆ: ಕೇಂದ್ರ ಸರ್ಕಾರ ಯುವ ಕೃಷಿ ಸಂಶೋಧನಾ ಉತ್ನನ್ನ ತಯಾರಿಸುವ ಯುವಕರಿಗೆ ಬಹುವಾಗಿ ನೆರವು ನೀಡುತ್ತಿದೆ. ನನಗೆ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಲ್ಲಿ 25 ಲಕ್ಷ ಅನುದಾನ ದೊರೆತಿದೆ ಎನ್ನುತ್ತಾರೆ ಸುರೇಶ್