ನವದೆಹಲಿ: ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2022ನೇ ಸಾಲಿನ ‘ಸ್ಮಾರ್ಟ್ ಸಿಟಿ ಪ್ರಶಸ್ತಿ’ (Smart City Award)ಗಳನ್ನು ಘೋಷಣೆ ಮಾಡಿದ್ದು ‘ಬೆಸ್ಟ್ ಸ್ಟೇಟ್’ ಅವಾರ್ಡ್ ಮಧ್ಯಪ್ರದೇಶದ ಪಾಲಾಗಿದೆ. ಎರಡನೇ ಸ್ಥಾನ ತಮಿಳುನಾಡಿಗೆ ಸಿಕ್ಕಿದ್ದರೆ, ರಾಜಸ್ಥಾನ ಮತ್ತು ಉತ್ತರಪ್ರದೇಶ ಜಂಟಿಯಾಗಿ ತೃತೀಯ ಸ್ಥಾನಿಗಳಾಗಿವೆ.
ಇನ್ನು ಬೇರೆ ಬೇರೆ ವಿಭಾಗಗಳಲ್ಲಿ ಕರ್ನಾಟಕದ ಮೂರು ನಗರಗಳು ಈ ಪ್ರಶಸ್ತಿಗೆ ಭಾಜನವಾಗಿವೆ. ಆದರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಕರಾವಳಿಯ ನಗರ ಮಂಗಳೂರಿಗೆ ಮಾತ್ರ ಈ ಬಾರಿ ಯಾವ ವಿಭಾಗದಲ್ಲೂ ಪ್ರಶಸ್ತಿ ಸಿಕ್ಕಿಲ್ಲ.
ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ, ನಾವಿನ್ಯದ ಪರಿಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಪ್ರಶಸ್ತಿ ಪಡೆದುಕೊಂಡಿದ್ದರೆ, ಬೆಳಗಾವಿಗೆ ವಲಯ ಸ್ಮಾರ್ಟ್ ಸಿಟಿ ಪ್ರಶಸ್ತಿ (ದಕ್ಷಿಣ ವಲಯ) ಲಭಿಸಿದೆ.
ಸೆ.27ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ.
ಕೇಂದ್ರಾಡಳಿತ ವಿಭಾಗದಲ್ಲಿ ಚಂಢೀಗಢ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಮಾತ್ರವಲ್ಲದೆ ಇದು, ತನ್ನ ಇ-ಗವರ್ನೆನೆನ್ಸ್ ಸೇವೆಗಳಿಗಾಗಿ ಉತ್ತಮ ಸರಕಾರ ವಿಭಾಗದಲ್ಲಿವಿಜೇತ ಸ್ಥಾನವನ್ನಲಂಕರಿಸಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಇಂದೋರ್ ನಗರ ಸತತ ಆರನೇ ಬಾರಿಗೆ ಭಾರತದ ಅತೀ ಸ್ವಚ್ಛ ನಗರವೆಂಬ ಹೆಗ್ಗಳಿಗೆಕೆಗೆ ಪಾತ್ರವಾದ ಸಾಧನೆಗೈದಿತ್ತು.
‘ಬಿಲ್ಟ್ ಎನ್ವಿರಾನ್ಮೆಂಟ್’ ವಿಭಾಗದಲ್ಲಿ ತನ್ನಲ್ಲಿರುವ ಅತ್ಯುತ್ತಮ ರಸ್ತೆಗಳು ಹಾಗೂ ಕೆರೆಗಳ ಮರುಪೂರಣ ಮತ್ತು ಪುನರುಜ್ಜೀವನ ಕಾರ್ಯಗಳಿಗಾಗಿ ಕೊಯಂಬತ್ತೂರು ನಗರ ಇಂದೋರ್ ಬಳಿಕದ ಸ್ಥಾನವನ್ನು ಪಡೆದುಕೊಂಡಿದ್ದರೆ ಮೂರನೇ ಸ್ಥಾನವನ್ನು ನ್ಯೂ ಟೌನ್ ಕೊಲ್ಕತ್ತಾ ಹಾಗೂ ಕಾನ್ಪುರ ಪಟ್ಟಣಗಳು ಹಂಚಿಕೊಂಡಿವೆ.
‘ಎಕಾನಮಿ’ ವಿಭಾಗದಲ್ಲಿ ಜಬಲ್ಪುರ ಪ್ರಥಮ ಸ್ಥಾನಿಯಾಗಿದ್ದರೆ, ಇಂದೋರ್ ಮತ್ತು ಲಕ್ನೋ ಆ ಬಳಿಕದ ಸ್ಥಾನಗಳಲ್ಲಿವೆ.
ಸೈಕಲ್ ಟ್ರ್ಯಾಕ್ ಸಹಿತ ಪಬ್ಲಿಕ್ ಬೈಕ್ ಶೇರಿಂಗ್ ವ್ಯವಸ್ಥೆಯನ್ನು ಉತ್ತಮವಾಗಿ ಅಳವಡಿಸಿಕೊಂಡಿರುವ ಇಂದೋರ್ ಮೊಬಿಲಿಟಿ ವಿಭಾಗದಲ್ಲಿಬೆಸ್ಟ್ ಸಿಟಿ ಪ್ರಶಸ್ತಿ ಪಡೆದುಕೊಂಡಿದ್ದರೆ, ನ್ಯೂ ಟೌನ್ ಕೊಲ್ಕೊತ್ತಾ ಹಾಗೂ ಸಾಗರ್ ಆ ಬಳಿಕದ ಸ್ಥಾನಗಳನ್ನು ಪಡೆದುಕೊಂಡಿವೆ.
ದೇಶಾದ್ಯಂತ ಪ್ರಸ್ತಾವಿತ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿಇಲ್ಲಿಯವರೆಗೆ 6041 (76%) ಯೋಜನೆಗಳು ಪೂರ್ಣಗೊಂಡಿದ್ದು ಇವುಗಳ ಒಟ್ಟು ವೆಚ್ಚ 1,10,635 ಕೋಟಿ ರೂಪಾಯಿಗಳಾಗಿದ್ದು, ಉಳಿದ 1,894 ಯೋಜನೆಗಳು 2024ರ ಜೂನ್ 30ರೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.