ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ನಾರಿಶಕ್ತಿಯೇ ಪರಮೋಚ್ಛ. ನವರಾತ್ರಿ ದಿನಗಳಲ್ಲಿ ಮೋದಿಯವರು ನವದುರ್ಗೆಯರನ್ನು ಆರಾಧಿಸಿ ಒಂಬತ್ತು ದಿನಗಳಲ್ಲಿ ಅನ್ನಾಹಾರ ತ್ಯಜಿಸಿ ಕೇವಲ ನೀರು ಕುಡಿದು ನವರಾತ್ರಿ ಆಚರಿಸುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ನಾರಿಶಕ್ತಿಗೆ ನೀಡುವ ಮನ್ನಣೆಯನ್ನು ಗುರುತಿಸಿ ಈ ಬಾರಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಮೋದಿ ಪರವಾಗಿ ನಾರಿಶಕ್ತಿ ಒಗ್ಗೂಡುವಂತೆ ಕರೆ ನೀಡಿದ್ದರು. ಇದಕ್ಕೆ ಮಂಗಳೂರಿನಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ.
ಎಲ್ಲ ಮತಗಟ್ಟೆಗಳಲ್ಲೂ ನವದುರ್ಗೆಯರಾಗಿ ಮಹಿಳೆಯರು ಮೊದಲು ಬಂದು ಮತ ಚಲಾಯಿಸಿದ್ದಾರೆ. ಇದರ ಫೋಟೋಗಳನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದು, ಬಿಜೆಪಿ ಅಭ್ಯರ್ಥಿ ನೀಡಿರುವ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿರುವುದು ಕಂಡುಬಂದಿದೆ. ನವದುರ್ಗೆಯರ ರೂಪದಲ್ಲಿ ಮತಗಟ್ಟೆಗೆ ಮೊದಲು ಬಂದು ಮತ ಚಲಾಯಿಸಬೇಕು, ಆಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಆಶೀರ್ವಾದ ಮಾಡಬೇಕು ಎಂದು ಬ್ರಿಜೇಶ್ ಚೌಟ ಕರೆ ನೀಡಿದ್ದರು.
ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಒಂಬತ್ತು ಮಂದಿ ಮಹಿಳೆಯರು ಬೆಳಗ್ಗೆ 6.30ರ ವೇಳೆಗೇ ಬಂದು ಕುಳಿತುಕೊಂಡಿದ್ದರು. ಮತಗಟ್ಟೆ ತೆರೆಯುವ ಮೊದಲೇ ಸೀರೆಯುಟ್ಟ ನಾರಿಯರು ಹೊರಗಿನ ಅಂಗಣದಲ್ಲಿ ಕುಳಿತು ವಿಜಯದ ನಗೆ ಬೀರಿದ್ದಾರೆ. ಆಮೂಲಕ ನಾರಿಶಕ್ತಿಯ ಸಾಥ್ ನರೇಂದ್ರ ಮೋದಿ ಪರವಾಗಿದೆ ಎನ್ನುವ ಸಂದೇಶವನ್ನು ಮಹಿಳೆಯರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲೆಯಾದ್ಯಂತ ನಾರಿಶಕ್ತಿಯರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೊದಲ ಬಾರಿಗೆ ಮತಗಟ್ಟೆಗೆ ಬಂದು ಮೋದಿಯವರಿಗೆ ಆಶೀರ್ವದಿಸಿದ್ದಾರೆ. ಅವರಿಗೆಲ್ಲ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಬೆಳಗ್ಗೆ ಎಂದಿನ ತಮ್ಮ ಕೆಲಸ ಮುಗಿಸಿ ಮತಗಟ್ಟೆಗೆ ತೆರಳುವುದು ರೂಢಿ. ಆದರೆ, ಬ್ರಿಜೇಶ್ ಚೌಟರು ನವದುರ್ಗೆಯರ ರೂಪದಲ್ಲಿ ಬನ್ನಿ ಎನ್ನುವ ಕೋರಿಕೆ ಇಟ್ಟಿದ್ದನ್ನು ಮಹಿಳೆಯರು ಪುರಸ್ಕರಿಸಿದ್ದಾರೆ. ಆಮೂಲಕ ಮತದಾನ ಕೇಂದ್ರಗಳಲ್ಲಿ ಮಹಿಳೆಯರು ಬೆಳಗ್ಗೆಯೇ ಹೊಸ ಸಂಚಲನ ಮೂಡಿಸಿದ್ದಾರೆ.