ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಭೇಟಿ ಬಳಿಕ ಭಾರತದಿಂದ ಅಮೆರಿಕಕ್ಕೆ ಕಳ್ಳಸಾಗಣಿಕೆ ಮಾಡಲಾದ 105 ಪುರಾತನ ಅತ್ಯಮೂಲ್ಯ ವಸ್ತುಗಳನ್ನು ವಾಪಸ್ ತರಲಾಗಿದೆ ಎಂದು ಯುಎಸ್‌ನಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ತಿಳಿಸಿದ್ದಾರೆ.
ಭಾರತೀಯ ಕಾನ್ಸುಲೇಟ್ ಜನರಲ್‌ನಲ್ಲಿ ಪ್ರಾಚೀನ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ನಡೆದಿದ್ದು, ಕಳೆದುಹೋದ ನಮ್ಮ ಪರಂಪರೆ ಕೊಂಡಿಯ ಪ್ರತೀಕಗಳು ಮರಳಿ ನಮಗೆ ದೊರೆತಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ ವಾಷಿಂಗ್ಟನ್‌ನಲ್ಲಿ ನಡೆದ ಅನಿವಾಸಿಗರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪಿಸಿದ್ದು, ” ನಮ್ಮ ದೇಶದಿಂದ ಕಳವಾದ 100 ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ ಎಂದು ಎಂದು ತಿಳಿಸಿದ್ದರು. ಅಲ್ಲದೆ ಇದಕ್ಕಾಗಿ ನಾನು ಅಮೆರಿಕನ್ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದರು.
ಸೋಮವಾರ ವಾಪಸ್ ಪಡೆಯಲಾದ ಪ್ರಾಚೀನ ವಸ್ತುಗಳಲ್ಲಿ ಸುಮಾರು ಹಿಂದೂ, ಜೈನ ಮತ್ತು ಮುಸ್ಲಿಮರ ಧಾರ್ಮಿಕ ವಸ್ತುಗಳು ಸೇರಿವೆ. ಹಲವು ವಸ್ತುಗಳನ್ನು ದೇವಾಲಯಗಳಿಂದ ಕಳ್ಳತನ ಮಾಡಲಾಗಿತ್ತು. ಸುಭಾಷ್ ಕಪೂರ್ ಸೇರಿದಂತೆ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟಾರ್ಗಳು ಈ ವಿಗ್ರಹ, ಅಪರೂಪದ ವಸ್ತು ಕಳ್ಳತನ ಜಾಲದ ಹಿಂದಿದ್ದರು. ಕಪೂರ್, ಭಾರತ, ಅಫ್ಘಾನಿಸ್ತಾನ್, ಕಾಂಬೋಡಿಯಾ, ಇಂಡೋನೇಷ್ಯಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್‌ನಲ್ಲಿ ಸಂಘಟಿತ ಪುರಾತನ ವಸ್ತುಗಳ ಕಳ್ಳತನ ಜಾಲ ನಡೆಸುತ್ತಿದ್ದ.