ಮಂಗಳೂರು: ಕೇರಳ ಸರಕಾರ ಗಣರಾಜ್ಯೋತ್ಸವ ಪರೇಡಿಗೆ ನಾರಾಯಣ ಗುರು ಸ್ತಬ್ಧಚಿತ್ರ ಮಾಡಿದಾಗ, ಇಲ್ಲದ ನೆಪ ಹೇಳಿ ನಿರಾಕರಣೆ ಮಾಡಲಾಗಿತ್ತು. ಆನಂತರ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ನಾರಾಯಣ ಗುರುಗಳ ಪಠ್ಯವನ್ನೇ ಏಳನೇ ತರಗತಿಯಿಂದ ತೆಗೆದು ಹಾಕಲಾಗಿತ್ತು. ಅದನ್ನು ಬಿಜೆಪಿ ನಾಯಕರು ಪ್ರಶ್ನೆ ಮಾಡಲಿಲ್ಲ. ಇದೀಗ ಬಿಲ್ಲವ ಸಮಾಜದ ಓಲೈಕೆಗಾಗಿ ಬಿಜೆಪಿಗೆ ಮತ್ತೆ ನಾರಾಯಣ ಗುರು ನೆನಪಾಗಿದ್ದಾರೆ. ಪ್ರಧಾನಿ ಮೋದಿಯವರ ಮೂಲಕ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕಟಕಿಯಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ತಬ್ಧಚಿತ್ರದ ವಿಚಾರ ಬಂದಾಗ ಇಲ್ಲಿನ ಸಂಸದರು ಮುಂದಿನ ವರ್ಷವೇ ನಾವು ಸ್ತಬ್ಧಚಿತ್ರ ಮಾಡಿಸುತ್ತೇವೆ ಎಂದಿದ್ದರು. ಆದರೆ ಅದು ಈಡೇರಿಕೆ ಆಗಿಲ್ಲ. ನಾವು ಬಿಲ್ಲವ ಸಮಾಜದಿಂದ ಪ್ರತಿಭಟನೆ ನಡೆಸಿದಾಗಲೂ ಯಾವುದೇ ಬಿಜೆಪಿ ನಾಯಕರು ನಮಗೆ ಬೆಂಬಲ ನೀಡಿಲ್ಲ. ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ನಾರಾಯಣ ಗುರುಗಳ ಪಠ್ಯ ತೆಗೆದು ಹಾಕಿದ್ದ ರೋಹಿತ್ ಚಕ್ರತೀರ್ಥ ಅವರನ್ನು ನಮ್ಮ ವಿರೋಧ ನಡುವೆಯೇ ಮಂಗಳೂರಿಗೆ ತಂದು ಸನ್ಮಾನ ಮಾಡಿದ್ದರು. ಬೆಳ್ತಂಗಡಿಯ ವೇಣೂರಿನಲ್ಲಿ ಅಜಿಲರಸರು ವಿರೋಧಿಸಿದ್ದರೂ ಪ್ರೇಕ್ಷಕರ ರೀತಿಯಲ್ಲಿ ಶಾಸಕ ಹರೀಶ್ ಪೂಂಜ, ರೋಹಿತನ್ನು ಕರೆಸಿ ಸನ್ಮಾನ ಮಾಡಿಸಿದ್ದರು. ಬಿಲ್ಲವ ಸಮಾಜಕ್ಕೆ ಅಪಮಾನ ಮಾಡಿದವರನ್ನು ಸನ್ಮಾನಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಸಮುದಾಯದ ಭಾವನೆ ಜೊತೆ ಚೆಲ್ಲಾಟವಾಡಿದರೆ ಅದಕ್ಕೆ ತಕ್ಕ ಉತ್ತರವನ್ನು ಸಮಾಜ ಈ ಬಾರಿಯ ಚುನಾವಣೆಯಲ್ಲಿ ನೀಡಲಿದೆ. ಬಿಲ್ಲವ ಸಮಾಜ ಮುಗ್ಧ ಮತ್ತು ನಂಬಿಕಸ್ಥ ಸಮಾಜ. ಭಾವನಾತ್ಮಕವಾಗಿ ಚೆಲ್ಲಾಟವಾಡಬಹುದು ಎಂದು ಸ್ಥಳೀಯ ನಾಯಕರು ಭಾವಿಸಿದ್ದರೆ ಅದು ಇನ್ನು ಮುಂದೆ ಸಾಧ್ಯವಿಲ್ಲ. ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಮತ್ತು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಸಮುದಾಯದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡುತ್ತಿದ್ದೇವೆ. ಸಮಾಜದಲ್ಲಿ ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಚುನಾವಣೆ ಫಲಿತಾಂಶದಿಂದ ನಿರ್ಧಾರ ಆಗಲಿದೆ ಎಂದು ಸತ್ಯಜಿತ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದ ಕುಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.