ಬೆಂಗಳೂರು: ಬಿಜೆಪಿ ಸರ್ಕಾರವನ್ನು ಚುನಾವಣೆಯಲ್ಲಿ ಮಣಿಸಲು ನೆರವಾಗಿದ್ದ ಕಮಿಷನ್ ದಂಧೆ, ಭ್ರಷ್ಟಾಚಾರದ ಅಸ್ತ್ರ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತಿರುಗು ಬಾಣವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ದಂಧೆ, ಲಂಚಾವತಾರದ ವಿರುದ್ಧ ಬಿಜೆಪಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಎರಡನೇ ಸಲ ತಿಹಾರ್ ಜೈಲಿಗೆ ಹೋಗಲು ಸಿದ್ದರಾಗಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸರ್ಕಾರದ ಖಜಾನೆಯ ಹಣ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮನೆಗೆ ಹೋಗಿದೆ. ಖಜಾನೆ ಖಾಲಿ ಮಾಡಿದ ಲೂಟಿಕೋರ ಸರ್ಕಾರ ತೊಲಗಬೇಕು. ಡಿಕೆ ಶಿವಕುಮಾರ್ ಅವರೇ ನೀವು ತಿಹಾರ್ ಜೈಲಿಗೆ ಹೋಗಿ ಬಂದಿದ್ದೀರಿ. ಇದೀಗ ಎರಡನೇ ಸಲ ತಿಹಾರ್ ಜೈಲಿಗೆ ಹೋಗಲು ಸಿದ್ದರಾಗಿ ಎಂದು ಕಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಲಂಚಾವತಾರ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನಿನ್ನೆ ಸಿಕ್ಕ ಹಣ ಡಿಕೆ ಶಿವಕುಮಾರ್ ಅವರದ್ದು ಅಂತ ಪತ್ರಿಕೆಗಳು, ಟಿವಿಗಳು ಹೇಳುತ್ತಿವೆ. ಪಂಚರಾಜ್ಯ ಚುನಾವಣೆಗೆ ಎಟಿಎಂ ಕರ್ನಾಟಕ ಆಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಹಣ ಕರ್ನಾಟಕದಿಂದ ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.
ಹೊಟೇಲ್ಗಳಲ್ಲಿ ತಿಂಡಿಗೆ ಬೆಲೆ ಇದ್ದಂತೆ ಸರ್ಕಾರಿ ಕಚೇರಿಗಳಲ್ಲಿ ರೇಟ್ ಫಿಕ್ಸ್ ಆಗಿದೆ. ಸಿದ್ದರಾಮಯ್ಯರ ಸರ್ಕಾರ 80 ಪರ್ಸೆಂಟ್ ಸರ್ಕಾರ. ತಾಲೂಕು ಕಚೇರಿಗಳಲ್ಲಿ ತಹಶಿಲ್ದರ್ಗಳು ಲಂಚ ಕೇಳುತ್ತಾರೆ. ಲೆಕ್ಕಾಧಿಕಾರಿಗಳು ಲಂಚ ಕೇಳುತ್ತಾರೆ. ಪಿಡಿಓಗಳು ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಮಂಗಳೂರು ಹೊರವಲಯದ ಕಾವೂರು ಬಳಿ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು. ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಭಾಗಿಯಾಗಿದ್ದರು. ಸಿದ್ದರಾಮಯ್ಯರನ್ನು ಲೂಟಿಕೋರ, ಡಿಕೆ ಶಿವಕುಮಾರ್ ಅವರನ್ನು ಭ್ರಷ್ಟಾಚಾರಿ ಎಂದು ಘೋಷಣೆಗಳನ್ನು ಕೂಗಲಾಯಿತು. ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂದು ಘೋಷಣೆಗಳೊಂದಿಗೆ ಧಿಕ್ಕಾರಗಳನ್ನೂ ಕೂಗಲಾಯಿತು.