ಬೆಂಗಳೂರು: ಜುಲೈನಲ್ಲಿ ಬೆಂಗಳೂರಿನ ನಿಜಗುಣ ಕಲ್ಯಾಣಮಂಟಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜಾ ಉತ್ಸವದ ಕಾರ್ಯಕ್ರಮದ ನಡೆಯಲಿದ್ದು, ಅದರ ಅಧ್ಯಕ್ಷತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ವಹಿಸಲಿದ್ದಾರೆ ಎಂಬ ಆಹ್ವಾನ ಪತ್ರಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆರ್‌ಎಸ್‌ಎಸ್ ನಡೆಸುವ ಕಾರ್ಯಕ್ರಮಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಹೀಗಾಗಿ ಈ ಸಂಬಂಧ ನಾಗತಿಹಳ್ಳಿ ಸ್ಪಷ್ಟನೆ ನೀಡಿದ್ದಾರೆ.
ಈ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ.ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ. ಅದು ‘ಆಕಸ್ಮಿಕ’ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ.
ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ,ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ,ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ ಮನಸ್ಸುಗಳಿಗೆ ಹೇಳುವ ಒಂದು ಮಾತು: ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ.ಅದನ್ನೇ ಮುಂದುವರೆಸುತ್ತೇನೆ.
ತಪ್ಪು ತಿಳಿಯಲು,ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ,ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು ಎಂದು ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.