ಮಂಗಳೂರು, ನ.7: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲಿನಲ್ಲಿ ಮುಸ್ಲಿಂ ಧರ್ಮದ ವ್ಯಕ್ತಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಾಲಯ ಇರುವ ಬಗ್ಗೆ ವ್ಯಕ್ತಿಯೊಬ್ಬರಿಗೆ ಕನಸು ಬಿದ್ದಿದೆ. ಅದರಂತೆ ಜೆಸಿಬಿ ಮೂಲಕ ಜಮೀನು ಅಗೆದಾಗ ನಶಿಸಿ ಹೋಗಿದ್ದ ನೂರಾರು ವರ್ಷಗಳ ಹಿಂದಿನ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆಯಾಗಿದೆ. ಹೀಗಾಗಿ ಮುಸ್ಲಿಂ ವ್ಯಕ್ತಿ ತನ್ನ ವಶದಲ್ಲಿದ್ದ ಜಮೀನನ್ನು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ.
ಬೆಂಗಳೂರು ಮೂಲದ ಲಕ್ಷ್ಮಣ್ ಎಂಬವರು ತೆಕ್ಕಾರಿನಲ್ಲಿ ಜಮೀನು ಖರೀದಿಸಿದ್ದರು. ಇವರಿಗೆ ಬಿದ್ದ ಕನಸಿನಲ್ಲಿ ತಾನು ಖರೀದಿಸಿದ ಜಮೀನಿನ ಪಕ್ಕದಲ್ಲಿರುವ ಮುಸ್ಲಿಂ ವ್ಯಕ್ತಿ ಹಾಮದ್ ಬಾವ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಸ್ಥಾನ ಇರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಲಕ್ಷ್ಮಣ್ ಅವರು ಗ್ರಾಮದ ಜನರಿಗೆ ಮಾಹಿತಿ ನೀಡಿದ್ದರು.
ಅದರಂತೆ ಜ್ಯೋತಿಷಿಗಳ ಮೂಲಕ ಚಿಂತನೆ ನಡೆಸಿದಾಗ ಭೂಗರ್ಭದಲ್ಲಿ ದೇವರಿರುವ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ ಜೆಸಿಬಿ ಮೂಲಕ ಭೂಮಿಯ ಅಗೆತ ನಡೆಸಿದ್ದರು. ಹತ್ತಾರು ಅಡಿ ಅಗೆಯುತ್ತಿದ್ದಂತೆ ಭಗ್ನಗೊಂಡ ಗೋಪಾಲ ಕೃಷ್ಣ ದೇವರ ವಿಗ್ರಹ ಪತ್ತೆಯಾಗಿದೆ.
ಅದರಂತೆ, ವಿಗ್ರಹ ಪತ್ತೆಯಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರು ತೀರ್ಮಾನಿಸಿದ್ದು, ಹಾಮದ್ ಅವರು ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಬಿಟ್ಟುಕೊಟ್ಟಿದ್ದಾರೆ. ಹಾಮದ್ ಅವರಿಗೆ ಪೂರ್ವಜರಿಂದ ಕೃಷಿ ಭೂಮಿ ಬಂದಿತ್ತು. ಸರ್ವೆ ನಡೆಸಿದಾಗ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗಿದೆ.