30 ವರ್ಷ ಹಳೆಯ ಲಂಡನ್ ಕೊಲೆ ಪ್ರಕರಣದಲ್ಲಿ ಭಾರತೀಯ ಮೂಲದ ಸಂದೀಪ್ ಪಟೇಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆರೋಪಿ ಲೈಂಗಿಕ ಕಾರ್ಯಕರ್ತೆಯನ್ನು 140 ಬಾರಿ ಇರಿದು ಕೊಂದಿದ್ದು, 30 ವರ್ಷಗಳ ಬಳಿಕ ತನ್ನದೊಂದು ತಲೆಕೂದಲಿನ ಎಳೆಯಿಂದಾಗಿ ಸಿಕ್ಕಿಬಿದ್ದಿದ್ದಾನೆ. ಸಂದೀಪ್ ಪಟೇಲ್(51) 1994 ರಲ್ಲಿ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಪ್ರದೇಶದಲ್ಲಿದ ಫ್ಲಾಟ್‌ವೊಂದರಲ್ಲಿ ಲೈಂಗಿಕ ಕಾರ್ಯಕರ್ತೆ ಮರೀನಾ ಕೊಪ್ಪೆಲ್(39) ಅವರನ್ನು 140 ಬಾರಿ ಇರಿದು ಕೊಂದಿದ್ದ. ತಾನು ಕೊಂದಿರುವುದಾಗಿ ಯಾವುದೇ ಸಾಕ್ಷಿ ಸಿಗದಂತೆ ಸಲೀಸಾಗಿ ಪಾರಾಗಿದ್ದ.
BBC ಯ ವರದಿಯ ಪ್ರಕಾರ, ಮರೀನಾ ಕೊಪ್ಪೆಲ್ ಹತ್ಯೆಯಾಗಿರುವ ಫ್ಲಾಟ್‌ನಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪಟೇಲ್ನ ಬೆರಳಚ್ಚು ಪತ್ತೆಯಾದರೂ ಕೂಡ ಬಹಳ ದಿನವಾದರೂ ಪ್ರಕರಣವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಆದರೆ ಇದೀಗಾ ಕೊಪ್ಪೆಲ್ ಧರಿಸಿದ್ದ ಉಂಗುರದಲ್ಲಿ ಸಿಲುಕಿಕೊಂಡಿದ್ದ ತಲೆಕೂದಲಿನ ಎಳೆಯಿಂದಾಗಿ 1994ರಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಲ್ಡ್ ಬೈಲೇ ನ್ಯಾಯಾಲಯ ಮಹತ್ತರ ಈ ತೀರ್ಪು ನೀಡಿದೆ. ತಲೆಕೂದಲಿನ ಎಳೆಯನ್ನು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಿದಾಗ ಸಂದೀಪ್ ಪಟೇಲ್‌ಗೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಹೆಚ್ಚುವರಿಯಾಗಿ, ಘಟನಾ ಸ್ಥಳದಲ್ಲಿ ಪತ್ತೆಯಾದ ರಕ್ತಸಿಕ್ತ ಹೆಜ್ಜೆಗುರುತು ಪಟೇಲ್‌ಗೆ ಹೊಂದಿಕೆಯಾಗಿದೆ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ. ಇದಲ್ಲದೇ ಕೊಲೆಯಾದ ಸ್ವಲ್ಪ ಸಮಯದ ನಂತರ ಪಟೇಲ್ ಮರೀನಾ ಅವರ ಬ್ಯಾಂಕ್ ಕಾರ್ಡ್ ಅನ್ನು ಬಳಸುವುದು ಸೇರಿದಂತೆ ಹೆಚ್ಚಿನ ಪುರಾವೆಗಳು ಅವರ ವಿರುದ್ಧದ ಪ್ರಕರಣವನ್ನು ಬಲಗೊಳಿಸಿವೆ.
ಮರೀನಾ ಅವರು ಹಲವು ವರ್ಷಗಳಿಂದ ಮಸಾಜ್ ಸೆಂಟರ್ ತೆರೆದಿದ್ದು, ಈ ಮೂಲಕ ಲೈಂಗಿಕ ಕೆಲಸವನ್ನು ಮಾಡುತ್ತಿದ್ದರು, ಕೊಲಂಬಿಯಾದಲ್ಲಿ ತನ್ನ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ. ಆದರೆ 1994 ರಲ್ಲಿ ರಕ್ತದ ಮಡುವಿನಲ್ಲಿ ಕೊಲೆಯಾಗಿ ಹೋಗಿದ್ದಳು.