ಉಳ್ಳಾಲ: ಸಹೋದ್ಯೋಗಿ ಸ್ನೇಹಿತ ಆತ್ಮಹತ್ಯೆಗೈದು ಸಾವನ್ನಪ್ಪಿದ ಬಳಿಕ ಖಿನ್ನನಾಗಿದ್ದ ಯುವಕನೋರ್ವ ನೇಣು ಬಿಗಿದು ಅತ್ಮಹತ್ಯೆಗೈದ ಘಟನೆ ಮುಡಿಪುವಿನಲ್ಲಿ ನಡೆದಿದೆ. ನಗರದ ಕಂಕನಾಡಿಯ ಶೋರೂಮಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಮುಡಿಪು, ಗರಡಿಪಳ್ಳ ನಿವಾಸಿ ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ ಜಯ ಎಂಬವರಿಗೆ ಸೇರಿದ ಮುಡಿಪುವಿನ ಕಾರಿನ ಗ್ಯಾರೇಜ್ ಒಳಗಡೆಯ ಕಬ್ಬಿಣದ ಸಲಾಕೆಗೆ ಕಿಶೋರ್ ನೇಣು ಹಾಕಿಕೊಂಡು ಆತ್ಮಹತ್ಯೆಗೈದಿದ್ದಾನೆ.
ನ.20ರಂದು ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ಕಿಶೋರ್ ತಡರಾತ್ರಿಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ ಮನೆಮಂದಿ, ಸ್ನೇಹಿತರು ಒಟ್ಟಾಗಿ ಮನೆಯ ಸುತ್ತ ಮುತ್ತ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿ ಬಳಿಕ ಕಿಶೋರ್ ದಿನನಿತ್ಯವೂ ಕೆಲಸದಿಂದ ವಾಪಸ್ಸಾಗಿ ಕುಳಿತುಕೊಳ್ಳುವ ಗ್ಯಾರೇಜ್ ಸಮೀಪ ಹುಡುಕಾಡಿದಾಗ ಬೈಕ್ ಪತ್ತೆಯಾಗಿದೆ. ಗ್ಯಾರೇಜ್ ಒಳಗಡೆ ಕಿಶೋರ್ ನೇಣು ಹಾಕಿರುವುದು ಬೆಳಕಿಗೆ ಬಂದಿದೆ. ಕಿಶೋರ್ ಕೆಲಸ ಮಾಡುತ್ತಿದ್ದ ಶೋರೂಮಿನ ಸಹೋದ್ಯೋಗಿ ಸುಪರ್ ವೈಸರ್ ಆರು ತಿಂಗಳ ಹಿಂದಷ್ಟೇ ಅತ್ಮಹತ್ಯೆ ಮಾಡಿಕೊಂಡಿದ್ದರು. ಆಪ್ತನ ಅಕಾಲಿಕ ಸಾವಿನಿಂದ ಕಿಶೋರ್ ಖಿನ್ನತೆಗೊಳಗಾಗಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.