ಪ್ರಧಾನಿ ನರೇಂದ್ರ ಮೋದಿಯವರು ಯುವಕರಿಗೆ ʼಕನಸನ್ನು ಕಾಣಿʼ ಎಂದು ಹೇಳಿದ ಮಾತಿನಂತೆ ಕಾರಿನಲ್ಲಿಯೇ ವಿಶ್ವವನ್ನು ಸುತ್ತವ ಕನಸನ್ನು ಕಂಡಂತಹ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕ ಮಹಮ್ಮದ್ ಸಿನಾನ್ ಇದಾಗಲೇ 12 ತಿಂಗಳಲ್ಲಿ 50,000 ಕಿ.ಮೀ ಕ್ರಮಿಸಿ 50 ದೇಶಗಳನ್ನು ಸುತ್ತಿದ್ದಾರೆ. ಭಾರತೀಯ ಆಟೋಮೊಬೈಲ್ ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸುವ, ಭಾರತೀಯ ಪ್ರವಾಸೋದ್ಯಮವನ್ನು ವಿಶ್ವ ಮಟ್ಟದಲ್ಲಿ ಉತ್ತೇಜಿಸುವ ಹಾಗೂ ಜನರೊಂದಿಗೆ ಬೆರೆತು ಮಾತನಾಡುವ ನಿಟ್ಟಿನಲ್ಲಿ ಮಹೇಂದ್ರಾ ಸ್ಕಾರ್ಪಿಯೋ ಕಾರಿನಲ್ಲಿಯೇ ವಿಶ್ವ ಪರ್ಯಟನೆ ಮಾಡುತ್ತಿರುವ ಸಿನಾನ್, ತಾವು ಭೇಟಿ ನೀಡಿದಂತಹ ದೇಶಗಳಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಕಂಡು ಭಾರತವು ಜಾಗತೀಕ ಮಟ್ಟದಲ್ಲಿ ಅತೀ ಎತ್ತರಕ್ಕೆ ಬೆಳೆಯುತ್ತಿದೆ ಎಂಬ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಕುರಿತ ವಿಶೇಷ ವಿಡಿಯೋವೊಂದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಹಮ್ಮದ್ ಸಿನಾನ್ (@united.wander) ಈ ಒಂದು ವಿಶೇಷ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂಡಿಯಾ ಟೂ ಗ್ಲೋಬ್” ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಮ್ಮದ್ ಸಿನಾನ್ ತಮ್ಮ ಕಿರು ಪರಿಚಯವನ್ನು ಮಾಡಿ ಕೊಟ್ಟು, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯುವಕರೇ ಕನಸನ್ನು ಕಾಣಿ ಎಂದು ಹೇಳಿದ ಮಾತಿನಂತೆ ನಾನು ಕೂಡಾ ನಮ್ಮ ದೇಶದ ಪ್ರವಾಸೋದ್ಯಮವನ್ನು, ಆಟೋ ಮೊಬೈಲ್ ಉತ್ಪನ್ನಗಳ ಬಗ್ಗೆ ಪ್ರಮೋಟ್ ಮಾಡಲು ಮಹೇಂದ್ರಾ ಸ್ಕಾರ್ಪಿಯೋ ಕಾರಿನಲ್ಲಿಯೇ ವಿಶ್ವ ಪರ್ಯಟನೆ ಮಾಡುವ ಕನಸನ್ನು ಕಂಡು 12 ತಿಂಗಳಲ್ಲಿ 50,000 ಕಿ.ಮೀ ಕ್ರಮಿಸಿ 50 ದೇಶಗಳಿಗೆ ಭೇಟಿ ನೀಡಿದ್ದೇನೆ. ನಾನು ಭೇಟಿ ನೀಡಿದಂತಹ ಪ್ರತಿಯೊಂದು ದೇಶದಲ್ಲೂ ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಕಾಣಸಿಗುತ್ತಿವೆ. ಚರಂಡಿಯ ಮುಚ್ಚಳದಿಂದ ಹಿಡಿದು ಔಷಧಿಗಳವರೆಗೂ ಎಲ್ಲೆಲ್ಲೂ ಮೇಡ್ ಇನ್ ಇಂಡಿಯಾ ಉತ್ಪನ್ನಗಳೇ ಇವೆ. ಹೀಗೆ ಭಾರತವು ಇಡೀ ಜಗತ್ತಿನಲ್ಲಿ ಶೈನ್ ಆಗುತ್ತಿರುವುದನ್ನು ಕಂಡು ನನಗೆ ಹೆಮ್ಮೆಯಾಗುತ್ತಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.