Site icon newsroomkannada.com

ವೇಸ್ಟ್‌ ಪ್ಲಾಸ್ಟಿಕ್‌ ಬಾಟಲಿಗಳಿಂದಲೇ ಬಟ್ಟೆ ತಯಾರಿ: ಪ್ರಧಾನಿಯಿಂದ ಶಹಬ್ಬಾಸ್‌ ಪಡೆದ ಉದ್ಯಮಿಗಳಿವರು

ಪರಿಸರ ರಕ್ಷಣೆ ಎಂಬುದು ಕೇವಲ ಬಾಯಿಮಾತಿನ ಹೇಳಿಕೆಯಾಗಿಯೇ ಉಳಿದಿದೆ. ದಿನನಿತ್ಯ ಲಕ್ಷಗಟ್ಟಲೇ ಟನ್‌ಗಳಷ್ಟು ಪ್ಲಾಸ್ಟಿಕ್‌ ತ್ಯಾಜ್ಯ, ವಿಷಕಾರಿ ವಸ್ತುಗಳು ಭೂಮಿ, ಕಡಲೊಡಲು ಸೇರಿ ವಿವಿಧ ಜೀವವೈವಿಧ್ಯಕ್ಕೆ ಆಪತ್ತು ತರುತ್ತಿದ್ದರೂ ನಾವು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ನಗ್ನ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ವಿದೇಶಗಳಲ್ಲಿ ಲಕ್ಷಗಟ್ಟಲೇ ಸಂಬಳ, ಸವಲತ್ತುಗಳಿದ್ದ ಕೆಲಸ ತೊರೆದು ವೇಸ್ಟ್‌ ಪ್ಲಾಸ್ಟಿಕ್‌ ಬಾಟಲಿಗಳಿಂದಲೇ ಸಿದ್ಧಗೊಳ್ಳುವ ವಸ್ತ್ರ ಉದ್ದಿಮೆ ಸ್ಥಾಪಿಸಿ ಹುಸಿ ಪರಿಸರ ಕಾಳಜಿ ತೋರಿ ಬೊಗಳೆ ಬಿಡುವ ರಾಜಕಾರಣಿಗಳು ಸೇರಿದಂತೆ ಎಲ್ಲರಿಗೂ ನೈಜ ಮಾದರಿಯಾಗಿದ್ದಾರೆ ತಮಿಳು ನಾಡು ಮೂಲದ ತಂದೆ ಮಗ. ಇವರಿಬ್ಬರ ಸಾಹಸವನ್ನು ಪ್ರಧಾನಿ ಮೋದಿ ಕೂಡ ಮೆಚ್ಚಿಕೊಂಡಿದ್ದು, ಈ ಕಂಪನಿ ತಯಾರಿಸಿದ ಜಾಕೆಟ್‌ ಅನ್ನು ಸಂಸತ್ತಿನಲ್ಲಿ ಧರಿಸುವ ಮೂಲಕ ಪ್ರಧಾನಿಯೂ ಕೂಡ ಇವರ ಕಾರ್ಯಕ್ಕೆ ಶಹಬ್ಬಾಸ್‌ ನೀಡಿದ್ದರು. ಈ ಉದ್ಯಮದ ಕಿರುಪರಿಚಯ ಇಲ್ಲಿದೆ ನೋಡಿ

ತಂದೆ ಮಗನ ಉದ್ಯಮ ಸಾಹಸದ ಪರಿಚಯ ಇಲ್ಲಿದೆ ನೋಡಿ:
ಶಂಕರ್‌ ಪ್ರತಿಷ್ಠಿತ ಐಐಟಿಯಲ್ಲಿ ಶಿಕ್ಷಣ ಪಡೆದಿದ್ದರು. ಅದೇ ರೀತಿ ಭಾರತ ಮತ್ತು ವಿದೇಶಗಳಲ್ಲಿ ಮೂರು ದಶಕಗಳ ಕಾಲ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಲಕ್ಷಾಂತರ ರೂ. ವೇತನವಿತ್ತು. ಐಶಾರಾಮಿ ಜೀವನ ನಡೆಸುವಷ್ಟು ಸಂಪತ್ತು ಇತ್ತು. ಆದರೆ ಅವರ ಮನಸ್ಸಿನಲ್ಲಿ ಹಲವು ವರ್ಷಗಳಿಂದ ಕೊರಗೊಂದು ಕಾಡುತ್ತಿತ್ತು. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳು ಜೀವಜಗತ್ತಿಗೆ ಕಂಟಕವಾಗಿದ್ದು, ಇದಕ್ಕೊಂದು ಪರಿಹಾರ ಒದಗಿಸಬೇಕು ಎಂಬ ಚಿಂತನೆ ದಿನದಿಂದ ದಿನಕ್ಕೆ ದೃಢವಾಗುತ್ತಾ ಹೋಯಿತು. ಇದೇ ನಿಟ್ಟಿನಲ್ಲಿ ಭಾರತಕ್ಕೆ ಮರಳಿದ ಶಂಕರ್‌ 2008 ರಲ್ಲಿ ಶ್ರೀ ರೆಂಗಾ ಪಾಲಿಮರ್ಸ್ ಅನ್ನು ಸ್ಥಾಪಿಸಿದರು. ಅಂದಿನಿಂದ ಇವರ ಕಂಪನಿಯು ಪ್ಲಾಸ್ಟಿಕ್‌ ಬಾಟಲಿಗಳು, ಜವಳಿ ಉದ್ಯಮಗಳಲ್ಲಿ ತಿರಸ್ಕರಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ನೂಲು ಮತ್ತು ಫೈಬರ್‌ಗಳನ್ನು ಬಳಸಿ ವಿವಿಧ ವಸ್ತ್ರಗಳನ್ನು ತಯಾರಿಸುತ್ತಿದೆ. ಇದೀಗ ಇವರ ಕಂಪನಿ ವಹಿವಾಟು ವಾರ್ಷಿಕವಾಗಿ 100 ಕೋಟಿ ರೂನಷ್ಟಿದೆ. ಶಂಕರ್‌ ಅವರ ಸಾಹಸ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತಿದ್ದು ಅವರ ಮಗ ಸೆಂಥಿಲ್‌ ಶಂಕರ್‌. ತಂದೆಯಂತೆಯೇ ಸೆಂಥಿಲ್‌ ಕೂಡ ಐಐಟಿ ಶಿಕ್ಷಣ ಪಡೆದಿದ್ದರೂ ಎಲ್ಲರಂತೆ ವಿದೇಶಿ ಉದ್ಯೋಗವನ್ನು ನೆಚ್ಚಿಕೊಳ್ಳಲಿಲ್ಲ. ಪದವಿಯ ನಂತರ, ನನ್ನ ಹೆಚ್ಚಿನ ಗೆಳೆಯರು ವಿದೇಶದಲ್ಲಿ ನೆಲೆಸಿದರು. ಆದರೆ ಅದು ನನಗೆ ಆಗಿ ಬರಲಿಲ್ಲ. ನಾನು ವಿದೇಶದಲ್ಲಿ ನೆಲೆಯೂರಲು ಮತ್ತು ವಿದೇಶಿ ಸರ್ಕಾರಕ್ಕೆ ತೆರಿಗೆ ಪಾವತಿಸಲು ಬಯಸಲಿಲ್ಲ. ನಾನು ಕೇವಲ ಕ್ರಿಕೆಟ್ ಪಂದ್ಯಗಳಿಗಾಗಿ ದೇಶಭಕ್ತನಾಗಿರಲಿಲ್ಲ ಎಂದು ಹೇಳುತ್ತಾರೆ ಅವರು.

ಶಂಕರ್‌ ಮತ್ತು ಸೆಂಥಿಲ್‌ ಶಂಕರ್‌ ಅವರ ಕಂಪನಿ ಪ್ರತಿದಿನ 15 ಲಕ್ಷ ಪಿಇಟಿ ಬಾಟಲಿಗಳನ್ನು ಮರುಬಳಕೆ ಮಾಡುತ್ತದೆ. ಅದರಿಂದಲೇ ಜಾಕೆಟ್‌ಗಳು, ಬ್ಲೇಜರ್‌ಗಳು, ಟಿ-ಶರ್ಟ್, ಪ್ಯಾಂಟ್‌ಗಳನ್ನು ತಯಾರಿ ಮಾಡುತ್ತದೆ. ನಾವು ಸುಮಾರು ಎಂಟು ಪಿಇಟಿ ಬಾಟಲಿಗಳಿಂದ ಒಂದು ಟಿ-ಶರ್ಟ್ ತಯಾರಿಸುತ್ತೇವೆ ಎಂದು ಶಂಕರ್‌ ತಿಳಿಸಿದ್ದಾರೆ. ಅವರ – EcoLine ಕಂಪನಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಧಾನಿಯೂ ಧರಿಸಿದ್ದರು: ಕಳೆದ ಫೆಬ್ರವರಿ 2023 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕಂಪನಿಯ ನೀಲಿ ಸದ್ರಿ ಜಾಕೆಟ್ ಅನ್ನು ಸಂಸತ್ತಿನಲ್ಲಿ ಧರಿಸಿದಾಗ ಇವರ ಇಕೋಲೈನ್‌ ಬ್ರ್ಯಾಂಡ್ ವ್ಯಾಪಕ ಮೆಚ್ಚುಗೆ ಪಡೆಯಿತು. ಆ ಜಾಕೆಟ್‌ನ್ನು ಜಾಕೆಟ್ 25 ಪಿಇಟಿ ಬಾಟಲಿಗಳಿಂದ ತಯಾರಿಸಲಾಗಿತ್ತು. ಪ್ರಧಾನಿ ಭಾರತೀಯ ಸಂಸತ್ತು ಹಾಗೂ ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲಿಯೂ ಈ ಜಾಕೆಟ್‌ ಧರಿಸಿದ್ದರು. ನಾವು ಬ್ರಾಂಡ್‌ ಬೆಳೆಸಲು ಮಾಡಿದ ಕಠಿಣ ಪರಿಶ್ರಮಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದೇವೆ ಎಂಬುದು ನಮಗೆ ಹೆಮ್ಮೆಯ ವಿಷಯ ಎಂದು ಶಂಕರ್‌ ತಿಳಿಸುತ್ತಾರೆ. ಪ್ರಧಾನಿ ಜಾಕೆಟ್‌ ಧರಿಸಿದ ಬಳಿಕ ನಮ್ಮ ಉತ್ಪನ್ನಗಳ ಮಾರಾಟದಲ್ಲಿ ಶೇ 25 ರಷ್ಟು ಹೆಚ್ಚಳವಾಗಿದೆ ಎಂದು ಅವರು ವಿವರಿಸುತ್ತಾರೆ. ಶಂಕರ ಅವರ ಇಕೊಲೈನ್‌ ಕಂಪನಿಯ ಪ್ರಾಡೆಕ್ಟ್‌ಗಳಿಗೆ 500 ರೂ. ನಿಂದ 6,000 ರೂಪಾಯಿಗಳ ನಡುವೆ ಬೆಲೆಯಿದೆ, ಸೆಂಥಿಲ್ ತಿಂಗಳಿಗೆ ಕನಿಷ್ಠ 20,000 ಉಡುಪು ಆರ್ಡರ್‌  ನಿರ್ವಹಣೆ ಮಾಡುತ್ತಿದ್ದಾರೆ. ಕಂಪನಿಯು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಹೆಚ್ಚಿನ ಆರ್ಡರ್‌ಗಳನ್ನು ಪಡೆಯುತ್ತದೆ.

ಮೂಲ: ಬೆಟರ್‌ ಇಂಡಿಯಾ ವೆಬ್‌

Exit mobile version