ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಿಸಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮೂರು ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಖುಷ್ಬು ಸುಂದರಂ ಉಡುಪಿಗೆ ಆಗಮಿಸಿದ್ದು, ಪ್ರವಾಸಿ ಮಂದಿರದಲ್ಲಿ ಡಿಸಿ ಡಾ. ವಿದ್ಯಾಕುಮಾರಿ, ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಹಾಕೆ ಜೊತೆ ಚರ್ಚೆ ನಡೆಸಿದರು. ಪೊಲೀಸರು ದಾಖಲಿಸಿರುವ ಎಫ್ಐಆರ್ ಬಗ್ಗೆಯೂ ಮಾಹಿತಿ ಪಡೆದರು.
ಈ ನಡುವೆ ಈಗಾಗಲೇ ಕಾಲೇಜು ಆಡಳಿತ ಮಂಡಳಿ ಮೂರು ಮೊಬೈಲ್ಗಳನ್ನು ಪೊಲೀಸ್ ವಶಕ್ಕೆ ನೀಡಿದೆ. ಆದರೆ ಮೊಬೈಲ್ ಜಾಲಾಡಿದರೂ ಏನು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು, ಮೊಬೈಲ್ಗಳನ್ನು ಬೆಂಗಳೂರು ಎಸ್ಎಸ್ಎಲ್ಗೆ ಕಳುಹಿಸಲಿದ್ದಾರೆ. ಮೊಬೈಲ್ ನಲ್ಲಿ ದಾಖಲಾಗಿರುವ ಎಲ್ಲಾ ವಿಡಿಯೋ ಚಿತ್ರಗಳನ್ನು ರಿಟ್ರೈವ್ ಮಾಡಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಗುರುವಾರ ಆರೋಪಿ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದು ವಿಚಾರಣೆ ಸಾಧ್ಯತೆ ಇದೆ.