ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ನಂತೂರು – ಪಂಪ್ವೆಲ್ ಮಧ್ಯೆ ಇರುವ ಮಂಗಳ ಜ್ಯೋತಿ ಶಾಂತಿ ಕಿರಣ ಕಟ್ಟದ ಮುಂಭಾಗದ ಯೂ ಟರ್ನ್ ಮುಚ್ಚಿರುವುದನ್ನು ತೆರವುಗೊಳಿಸುವ ಕುರಿತು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್ ಅವರೊಂದಿಗೆ ಸಭೆ ನಡೆಸಿ ಮನವಿ ನೀಡಿದರು.
ಪಂಪ್ವೆಲ್ ಭಾಗದಿಂದ ಮರೋಳಿ, ಅಳಪೆ, ಕುಲಶೇಖರ ಭಾಗಕ್ಕೆ ತೆರಳುವ ವಾಹನ ಸವಾರರು, ನಂತೂರು – ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿಯ ಶಾಂತಿ ಕಿರಣದ ಬಳಿಯಿರುವ ಯೂಟರ್ನ್ ಮೂಲಕ ಸಂಚರಿಸುತಿದ್ದು, ಅಪಘಾತ ತಡೆಗಟ್ಟುವ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೆಲವು ದಿನಗಳಿಂದ ಯೂ ಟರ್ನ್ ಮುಚ್ಚಿದೆ. ಇದರಿಂದಾಗಿ ಪಂಪ್ವೆಲ್ ಭಾಗದಿಂದ ಮರೋಳಿ, ಕುಲಶೇಖರ ತೆರಳುವ ವಾಹನಗಳು ನಂತೂರು ಜಂಕ್ಷನಿಗೆ ಬಂದು ಯೂ ಟರ್ನ್ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ನಂತೂರು ಜಂಕ್ಷನ್ ನಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಯನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದು, ಶಾಸಕ ಕಾಮತ್ ಅವರು ಆಯುಕ್ತರೊಂದಿಗೆ ಸುಧೀರ್ಘ ಚರ್ಚೆ ನಡೆಸಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.
ಪೊಲೀಸ್ ಆಯುಕ್ತರು ಶಾಸಕರ ಮನವಿಯಂತೆ ಬೆಳಗಿನ ಹಾಗೂ ಸಂಜೆಯ ಸಮಯ ಯೂ ಟರ್ನ್ ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಕುರಿತು ಒಪ್ಪಿಕೊಂಡಿದ್ದಾರೆ. ಮರೋಳಿ ಮಾರಿಕಾಂಬ ದೇವಸ್ಥಾನದ ಭಾಗದಿಂದ ನಂತೂರು ಭಾಗಕ್ಕೆ ತೆರಳುವವರು ಪಂಪ್ವೆಲ್ ಮೂಲಕವೇ ಯೂ ಟರ್ನ್ ತೆಗೆದು ಬರಬೇಕು. ಆಡುಮರೋಳಿ ರಸ್ತೆಯಿಂದ ನಂತೂರು ಭಾಗಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವುದರಿಂದ ಅಪಘಾತಗಳು ನಡೆಯುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಅಪಘಾತಕ್ಕೊಳಗಾದವರಿಗೆ ಯಾವುದೇ ವಿಮೆ ಸೌಲಭ್ಯ, ಪರಿಹಾರ ನೀಡಲು ಸಾಧ್ಯವಾಗದಿರುವ ಘಟನೆಗಳು ನಡೆದಿವೆ. ಹಾಗಾಗಿ ಯೂ ಟರ್ನ್ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಶಾಸಕರಿಗೆ ತಿಳಿಸಿದ್ದಾರೆ.
ಆಡುಮರೋಳಿ ಪರಿಸರದಿಂದ ನಂತೂರಿಗೆ ತೆರಳುವ ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ಸಾಗದಂತೆ ತಡೆಯಲು ಯೂ ಟರ್ನ್ ಇರುವ ಸ್ಥಳದ ಬಳಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಶಾಸಕರ ಸಲಹೆಯಂತೆ ಬೆಳಗಿನ ಹಾಗೂ ಸಂಜೆಯ ವೇಳೆ ಸಿಬ್ಬಂದಿ ನೇಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಆಯುಕ್ತರು ಒಪ್ಪಿಗೆ ನೀಡಿದ್ದಾರೆ.
ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುವ ಶಾಸಕರು, ಸಂಚಾರಿ ನಿಯಮಗಳನ್ನು ಪಾಲಿಸಬೇಕು ಹಾಗೂ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸದಿರಲು ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅನಿರುದ್ಧ್ ಕಾಮತ್, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.