ಬಂಟ್ವಾಳ: ಈ ಬಾರಿ ಗಣೇಶೋತ್ಸವದ ಬೆನ್ನಲ್ಲೇ ಈದ್ ಮಿಲಾದ್ ಹಬ್ಬ ಬಂದಿದ್ದು ಈ ಸಂದರ್ಭದಲ್ಲಿ ಕೋಮು ಸೂಕ್ಷ್ಮಪ್ರದೇಶಗಳಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಜಿಲ್ಲೆಯ ಪೊಲೀಸ್ ಇಲಾಖೆಗೆ ಬಹುದೊಡ್ಡ ಸವಾಲಾಗಿದೆ.
ಈ ನಡುವೆ, ಗಣೇಶೋತ್ಸವ ಜಲಸ್ತಂಭನ ಮೆರವಣಿಗೆ ಸಂದರ್ಭದಲ್ಲಿ ಈದ್-ಮಿಲಾದ್ ಶುಭಾಶಯ ಕೋರಿ ಹಾಕಲಾಗಿದ್ದ ಬ್ಯಾನರ್ ಒಂದನ್ನು ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆಯಲ್ಲಿ ನಡೆದಿದೆ.
ಆದರೆ, ಸ್ಥಳಿಯರ ಸಮಯಪ್ರಜ್ಞೆಯಿಂದ, ಹಾನಿಗೊಳಗಾದ ಬ್ಯಾನರನ್ನು ಕೂಡಲೇ ಸರಿಪಡಿಸುವ ಮೂಲಕ ಸಂಭವಿಸಬಹುದಾಗಿದ್ದ ಘರ್ಷಣೆ ತಪ್ಪಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.
ಸಜೀಪಮೂಡದ ಕಂದೂರಿನಲ್ಲಿ ನಿನ್ನೆ (ಸೆ.21) ಸಾಯಂಕಾಲ 7ಗಂಟೆ ಸುಮಾರಿಗೆ ಇಲ್ಲಿನ ಗಣೇಶೋತ್ಸವ ಮೆರವಣಿಗೆ ಪ್ರಾರಂಭಗೊಂಡು ರಾತ್ರಿ 9.30ಕ್ಕೆ ಸುಭಾಷ್ ನಗರ ಕೊಳಕೆಗೆ ತಲುಪಿತ್ತು.
ಈ ವೇಳೆ ಜನಸಂದಣಿ ಇರೋದನ್ನೇ ಗಮನಿಸಿದ ಕೆಲ ಕಿಡಿಗೇಡಿಗಳು ಕೊಳಕೆ ಜಂಕ್ಷನ್ ಪಕ್ಕದಲ್ಲಿ ಮುಸ್ಲಿಂ ಬಾಂಧವರು ಹಾಕಿದ್ದ ಈದ್-ಮಿಲಾದ್ ಶುಭಾಶಯದ ಬ್ಯಾನರ್ ನ್ನು ಹರಿದು ಹಾಕಿದ್ದಾರೆ.
ತಕ್ಷಣವೇ ಇದನ್ನು ಗಮನಿಸಿದ ಸ್ಥಳೀಯರು, ಆ ಹರಿದ ಬ್ಯಾನರ್ ನ್ನು ಅಲ್ಲಿಯೇ ಸರಿಪಡಿಸುವ ಕೆಲಸ ಮಾಡಿದ್ದು, ಇಂತಹ ಕೆಲವು ಕಿಡಿಗೇಡಿಗಳಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಸ್ಥಳೀಯರು ಹಾಗೂ ಗಣೀಶೋತ್ಸವ ಕಾರ್ಯಕ್ರಮ ಆಯೋಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.