ಬೆಳಗ್ಗೆದ್ದು ಅಂಗಳದಲ್ಲಿ ಕುಳಿತಿದ್ದಾಗ ಪುಟ್ಟ ಹಕ್ಕಿಗಳ ಗುಂಪೊಂದು ಪನ್ನೇರಳೆ ಮರದಲ್ಲಿ ಬಂದು ಕುಳಿತಿರುವುದು ಕಂಡಿತು. ಅಲ್ಲಿಯತನಕ ನೋಡದಿದ್ದ ಸುಂದರ ಬಂಗಾರವರ್ಣ ಮೈಬಣ್ಣದ ಹಕ್ಕಿಗಳವು. ಬಂದು ಕುಳಿತಿದ್ದೇ ತಮ್ಮೊಳಗೇ ಏನೋ ಮಾತನಾಡತೊಡಗಿದವು. ‘ಆಹ್ ಎಷ್ಟು ಅಂದವಾಗಿವೆ’ ಎಂದುಕೊಳ್ಳುತ್ತಿದ್ದಾಗಲೇ ಈಗಾಗಲೇ ಅಲ್ಲಿದ್ದ ಇನ್ನೊಂದು ಹಕ್ಕಿ ಸಂಸಾರ ನೆನಪಾಗಿ ಹುಡುಕತೊಡಗಿದೆ. ‘ನಾವು ಹೊರಡುವೆವು’ ಎಂಬರ್ಥದಲ್ಲಿ ದಾಸವಾಳ ಗಿಡದ ಮೇಲೆ ಕುಳಿತಿದ್ದ ಆ ಹಳೆಯ ಹಕ್ಕಿಗಳು ಸ್ವಲ್ಪವೇ ಹೊತ್ತಿನಲ್ಲಿ ಪುರ್ರೆಂದು ಹಾರಿಹೋದಾಗ ಪಲಾಯನವೆಂಬುದು ಹಕ್ಕಿಗಳನ್ನೂ ಬಿಟ್ಟಿಲ್ಲವೇ ಎಂಬುದು ಕಾಡತೊಡಗಿತು. ಬಂದಿರುವುದಾದರೂ ವಲಸೆ ಹಕ್ಕಿಗಳು, ವಾರಗಳ ಕಾಲವಿದ್ದು ಮತ್ತೆ ತಮ್ಮ ನೆಲೆಗೆ ಹಾರಿಹೋಗುವಂತಹವು ಆದರೆ ಇಲ್ಲೇ ಬೀಡು ಬಿಟ್ಟಿದ್ದವುಗಳು ವಲಸಿಗರನ್ನು ಕಂಡು ಹೊರಟು ಹೋಗಿರುವುದು ಆಕಸ್ಮಿಕವೋ ಅಥವಾ ಪಲಾಯನವಾದ ಸೂತ್ರವೋ ಎಂಬುದಷ್ಟೇ ಜಿಜ್ಞಾಸೆಯಿಲ್ಲಿ.
ಇದೇ ವಿಷಯವನ್ನು ಮನುಷ್ಯ ಗುಣಕ್ಕೆ ಹೋಲಿಸಿದಾಗ ಆತ ವಲಸಿಗನೂ ಹೌದು, ಪಲಾಯನವಾದಿಯೂ ಹೌದು. ಉದಾಹರಣೆಗೆ ಒಂದೇ ರೀತಿಯ ನಿತ್ಯದ ಬದುಕು ನೀರಸವೆನಿಸಿದಾಗ ಹೊರಡುವ ಬಹುದಿನದ ಪ್ರಯಾಣವೂ ಒಂದು ರೀತಿಯ ವಲಸೆಯೇ ಆದರೆ ಎಲ್ಲವೂ ಹೀಗೆಂದು ಹೇಳಲಾಗದು ಯಾಕೆಂದರೆ ಹೊಟ್ಟೆಪಾಡಿಗಾಗಿ ಅನಿವಾರ್ಯದ ವಲಸೆಯೂ ಇಲ್ಲಿದೆ ಮತ್ತು ಈ ಕಾರಣಕ್ಕಾಗಿಯೇ ಒಲ್ಲದ ಮನಸಿನಿಂದ ಪರಿಸ್ಥಿತಿಗಳೊತ್ತಡದಿಂದ ಪರವೂರಿನಲ್ಲಿ ಬದುಕಬೇಕಾದ ಸಂಕಷ್ಟವೂ ಇದೆ. ಹೀಗಿದ್ದಾಗ ವಲಸೆ ಆನಂದವಲ್ಲ ಬದಲಾಗಿ ಇರಲೇಬೇಕಾದ ತುರ್ತು. ಆನಂದದ ವಿಹಾರ ಅಲ್ಪಕಾಲದ ವಲಸೆಯಾದರೆ ದುಡಿಮೆಯ ಪ್ರಯಾಣ ಬಹು ದೀರ್ಘ ಕಾಲದ್ದು ಹಾಗೂ ಹೋದಲ್ಲೇ ಬದುಕು ಕಟ್ಟಿಕೊಳ್ಳುವ ಸ್ಥಿತಿಯನ್ನು ತಂದೊಡ್ಡುವ ವಲಸೆ.
ಇನ್ನು ಪಲಾಯನವೆಂಬ ವಿಷಯದತ್ತ ನೋಡುವುದಾದರೆ ಪಲಾಯನ ವಲಸೆಯಲ್ಲ ಅದು ಸಂದರ್ಭವನ್ನು ಎದುರಿಸಲಾಗದೆ ಬೆನ್ನೊಡ್ಡುವುದಷ್ಟೇ. ಈ ಪಲಾಯನ ಉತ್ತರ ಕೊಡಲಾಗದ ಅಸಹಾಯಕ ಸ್ಥಿತಿಯೆಂದೂ ಹೇಳಬಹುದು. ಇಲ್ಲಿ ವಲಸಿಗರಂತೆ ಮತ್ತೆ ಬರುವ ಯಾವುದೇ ಸೂಚನೆಯಿಲ್ಲ ಹಾಗೂ ಇದೊಂದು ರೀತಿಯ ಮರೆತೇ ಬಿಡುವಂತಹ ಮನಸ್ಥಿತಿಯೆಂದೂ ಹೇಳಬಹುದು. ಇನ್ನೂ ಸರಳವಾಗಿ ಅವಲೋಕಿಸುವುದಾದರೆ ವಿಷಯ ಅಥವಾ ವಸ್ತುವಿನಿಂದ ತಪ್ಪಿಸಿಕೊಳ್ಳುವ ಪ್ರಕ್ರಿಯೆಯೇ ಈ ಪಲಾಯನ. ಆದರೆ ಇದನ್ನು ಓಡಿಹೋಗುವುದೆಂದು ಯಾವ ಪಲಾಯನವಾದಿಗಳೂ ಒಪ್ಪಿಕೊಳ್ಳಲಾರರು ಎಂಬ ಮಾತಂತೂ ಸತ್ಯ.
ಮನುಷ್ಯನಿಂದ ಹಿಡಿದು ಜಗತ್ತಿನ ಎಲ್ಲಾ ಜೀವಿಗಳಲ್ಲೂ ಇರುವಒಂದು ಸಾಮಾನ್ಯ ಗುಣ ವಲಸೆ ಮತ್ತು ಪಲಾಯನ. ಆದರೆ ವಲಸಿಗರಾಗಲಿ ಅಥವಾ ಪಲಾಯನವಾದಿಗಳಾಗಲಿ ಇಬ್ಬರ ಬಗ್ಗೆಯೂ ತುಸು ಎಚ್ಚರ ವಹಿಸಬೇಕಾದುದು ಅಗತ್ಯ ಇಲ್ಲವಾದರೆ ಪನ್ನೇರಳೆ ಮರವನ್ನು ಎಲ್ಲಿಂದಲೋ ಬಂದ ಹಕ್ಕಿ ಗುಂಪು ಅತಿಕ್ರಮಿಸಿದಂತೆ ನಮ್ಮಲ್ಲೇ ನಾವು ಪರಕೀಯರಾಗುವ ಕಾಲ ಬಂದೀತು. ವಲಸೆ ಹೊಟ್ಟೆಪಾಡಿನದ್ದಾದರೆ ಹಸಿವು ನೀಗಿಸುವತ್ತ ಚಿತ್ತವಿರಲಿ. ಅಸಹಾಯಕತೆಯ ಪಲಾಯನವಾದರೆ ಧೈರ್ಯ ತುಂಬುವ ಮನವಿರಲಿ ಅನ್ನೋದಷ್ಟೇ ಸದಾಶಯ.
ರೆಕ್ಕೆ ಇದ್ದರಷ್ಟೇ ಸಾಲದು!:
ಆತ ಉನ್ನತ ಶಿಕ್ಷಣ ಪೂರೈಸಿ ಉದ್ಯೋಗಕ್ಕಾಗಿ ಅಲೆಯುತ್ತಿದ್ದ. ಎಷ್ಟೇ ಹುಡುಕಿದರೂ ಆತನ ವಿದ್ಯೆಗೆ ತಕ್ಕ ಕೆಲಸ ಸಿಗಲಿಲ್ಲವೆಂಬ ಕಾರಣಕ್ಕಾಗಿ ನೊಂದು ಹೋಗಿದ್ದ. ಇದೇ ಕಾರಣಕ್ಕಾಗಿ ವ್ಯವಸ್ಥೆಗಳ ವಿರುದ್ಧ ರೊಚ್ಚಿಗೇಳುವಷ್ಟು ಮುಂದುವರಿದಿದ್ದ ಕೂಡಾ. ನಿತ್ಯ ಎಲ್ಲರನ್ನೂ ತೆಗಳುತ್ತಾ ತನಗೆ ಸರಿಯಾದುದು ಯಾವುದೂ ಸಿಗಲಿಲ್ಲವೆಂದೂ ಲೋಕವೇ ತಪ್ಪಾಗಿದೆಯೆಂದು ನಿಂದಿಸುವ ಮಟ್ಟಿಗೆ ಖಿನ್ನನಾಗಿದ್ದನೆಂದರೂ ತಪ್ಪಲ್ಲ.
ಇಲ್ಲಿ ಆತ ಅಷ್ಟು ಕಲಿತದ್ದು ತಪ್ಪೇ ಅಥವಾ ಆತನ ಅರ್ಹತೆಗೆ ತಕ್ಕಂತಿರುವ ಉದ್ಯೋಗ ಸಿಗದಿರುವುದು ತಪ್ಪೇ ಎಂದು ಯೋಚಿಸುವುದಾದರೆ ಎರಡೂ ತಪ್ಪಲ್ಲ ಬದಲಾಗಿ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳದಿರುವುದೇ ಈ ಸ್ಥಿತಿಗೆ ಕಾರಣ. ನಾವಾದರೂ ಅಷ್ಟೇ! ಪ್ರತಿದಿನ ಸಿಗದಿರುವುದಕ್ಕಾಗಿ ವ್ಯಥೆಪಡುತ್ತಾ ಕಣ್ಣೆದುರಿನ ಖುಷಿಯನ್ನು ಅದೆಷ್ಟೋ ಸಲ ಕಳೆದುಕೊಂಡು ಬಿಡುತ್ತೇವೆ ಅಥವಾ ಅವರಿಗಿರುವುದು ತನಗಿಲ್ಲವಲ್ಲ ಎಂದು ಹಲುಬುವುದರಲ್ಲೇ ಸಂತಸವನ್ನು ಕಳೆದುಕೊಂಡು ಬಿಡುತ್ತೇವೆ.
ನವಿಲು ಹಾಗೂ ಪಾರಿವಾಳದ ಹಕ್ಕಿಗಳನ್ನೊಮ್ಮೆ ಗಮನಿಸೋಣ. ಗಾತ್ರದಲ್ಲಿ ಬಹಳ ದೊಡ್ಡದಾಗಿ ವಿಶಾಲವಾದ ಗರಿಗಳನ್ನು ಹೊಂದಿದ ನವಿಲು ಹಾರಿದರೆ ಎಷ್ಟುದೂರ ಹಾರೀತು! ಕಣ್ಣಳತೆಯಷ್ಟು ಮಾತ್ರ. ಆದರೆ ಪಾರಿವಾಳ ಹಾಗಲ್ಲತನ್ನ ಪುಟ್ಟ ರೆಕ್ಕೆಗಳೊಂದಿಗೆ ಬಹು ಎತ್ತರಕ್ಕೂ ದೂರಕ್ಕೂ ಹಾರಬಲ್ಲ ಸಾಮರ್ಥ್ಯವನ್ನು ಹೊಂದಿರುವಂತಹದ್ದು. ಇಲ್ಲಿ ನವಿಲಿಗೆ ಏಕೆ ಅಸಾಧ್ಯವೆಂದರೆ ಬಹುಶ: ಅದರ ಹಿರಿದಾದ ಗಾತ್ರ ಹಾಗೂ ಪಾರಿವಾಳದ ಸಣ್ಣಜೀವ. ತನ್ನ ದೇಹದ ಗಾತ್ರದೊಡನೆ ಎಷ್ಟೇ ಎತ್ತರಕ್ಕೆ ಹಾರಲು ಯತ್ನಿಸಿದರೂ ಸಾಮರ್ಥ್ಯ ಕೆಲವು ಅಡಿಗಳಷ್ಟು ಮಾತ್ರ.
ನವಿಲು ಮತ್ತು ಪಾರಿವಾಳಗಳನ್ನು ಮನುಷ್ಯನ ಮನಸ್ಥಿತಿಯೊಡನೆ ಸಮೀಕರಿಸಿ ಒಮ್ಮೆ ನೋಡೋಣ. ತಾನೇ ಮೇಲೇಂಬ ಅಹಂ ನವಿಲಿನಂತೆಯೂ ತಾನು ಎಲ್ಲರಿಗಿಂತ ಕಿರಿಯವನೆಂಬ ಭಾವ ಪಾರಿವಾಳದಂತೆಯೂ ಗೋಚರವಾಗುತ್ತದೆ. ವ್ಯಕ್ತಿ ಎಷೇ ಉನ್ನತ ಸ್ಥಾನದಲ್ಲಿದ್ದರೂ ವಿಧೇಯತೆಯಿಂದ ವರ್ತಿಸಿದರೆ ಆತನ ವ್ಯಕ್ತಿತ್ವ ಪಾರಿವಾಳದಂತಾಗಲು ಸಾಧ್ಯ, ಅದಲ್ಲ ದೇತನಗೆ ಸರಿಸಮ ಯಾವುದೂ ಯಾರೂ ಇಲ್ಲವೆಂಬ ಭಾವ ಒಮ್ಮೆ ಆವರಿಸಿ ಬಿಟ್ಟರೆ ಸಾಕು ನವಿಲಿನ ನಡಿಗೆಯ ಅಹಂಭಾವ ಆವರಿಸಿಕೊಳ್ಳುವುದಲ್ಲದೇ ಎತ್ತರೆತ್ತರ ಹಾರಲು ಅಸಾಧ್ಯ.
ಹಿರಿಯ ಕಿರಿಯನೆಂಬ ವ್ಯತ್ಯಾಸಗಳನ್ನೂ ಅಂತರಗಳನ್ನೂ ಕಾಯ್ದುಕೊಳ್ಳದೆ ಎಲ್ಲರೊಳಗೊಂದಾಗಿ ಬೆರೆಯುವುದು ಎಲ್ಲಕ್ಕೂ ಮುಖ್ಯ ಎಂಬುದರ ಜೊತೆಗೆ ಸಿಗದಿರುವುದಕ್ಕಾಗಿ ಪರಿತಪಿಸುವ ಬದಲಾಗಿ ಇರುವುದರೊಂದಿಗೆ ಒಗ್ಗಿಕೊಳ್ಳುವುದು ಕೂಡಾ ಅಷ್ಟೇ ಅಗತ್ಯ. ನಾವು ನವಿಲಾಗುತ್ತೇವೆಯೋ ಅಥವಾ ಪಾರಿವಾಳವೋ ಆಯ್ಕೆ ನಮ್ಮದೇ ಆದರೂ ಗಾಳಿಗೆ ತಕ್ಕಂತೆ ಹಾರಲು ಕಲಿಯುವುದು ನಮ್ಮ ಶ್ರಮವನ್ನವಲಂಬಿಸಿದೆಯೇ ಹೊರತು ದೇವರು ವರಕೊಟ್ಟಂತೆ ತತ್‌ಕ್ಷಣಕ್ಕೆ ಎಲ್ಲವೂ ಸಿಗಬೇಕೆಂಬ ಹುಚ್ಚು ನಿರೀಕ್ಷೆಯಲ್ಲಿ ಅಲ್ಲ ಅಲ್ವೇ!
ಬದುಕಿಗೆ ಬೇಕು ವೈವಿಧ್ಯ:
ರಾಜನೊಬ್ಬ ತನ್ನ ಗದ್ದೆಯಲ್ಲಿ ಭತ್ತ ಬೆಳೆಸಲಾರಂಭಿಸಿದನು. ಇನ್ನೇನು ಕೊಯಿಲಿಗೆ ಬರುತ್ತಿದೆಯೆನ್ನುವ ಹೊತ್ತಿಗೆ ಸೊಂಪಾದ ಬೆಳೆ ಕಂಡು ಪಕ್ಷಿ ಸಂಕುಲ ಆಹಾರವನ್ನರಸಿ ಅತ್ತ ಬರಲಾರಂಭಿಸಿತು. ಒಂದು ದಿನ ವಿಹಾರಕ್ಕೆಂದು ಬಂದ ಅರಸನಿಗೆ ಹಕ್ಕಿಗಳು ಬೆಳೆ ತಿನ್ನುತ್ತಿರುವುದು ಕಣ್ಣಿಗೆ ಬಿದ್ದಿದ್ದೇ ಸಿಟ್ಟು ಉಕ್ಕಿ ಬಂದಿತು. ತನ್ನ ಕೆಲಸಗಾರರಿಗೆ ಬೆಳೆ ತಿನ್ನುವ ಎಲ್ಲಾ ಹಕ್ಕಿಗಳನ್ನು ಕೊಲ್ಲಲು ಆಜ್ಞಾಪಿಸಿದನು. ರಾಜಾಜ್ಞೆ ಮೀರದ ಸೇವಕರು ರಾಜ್ಯದಲ್ಲಿದ್ದ ಹಕ್ಕಿಗಳನ್ನೆಲ್ಲ ಬಡಿದು ಕೊಲ್ಲಲಾರಂಭಿಸಿದ ಕೆಲವೇ ದಿನಗಳಲ್ಲಿ ಹಕ್ಕಿಗಳ ಸಂಕುಲ ಕಣ್ಮರೆಯಾಯಿತು. ಇನ್ನುತನ್ನ ಬೆಳೆ ತಿನ್ನಲು ಹಕ್ಕಿಗಳು ಬಾರದೆಂಬ ನಿಶ್ಚಿಂತೆಯಲ್ಲಿದ್ದ ಅರಸನ ಬಳಿ ಸೊಂಪಾಗಿ ಬೆಳೆದ ಬೆಳೆಗಳೆಲ್ಲವೂ ಸೊರಗಿ ಹೋಗಿವೆ, ಹೀಗೆಯೇ ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದು ಎಂದು ಕೆಲವೇ ದಿನಗಳಲ್ಲಿ ಕೆಲಸಗಾರರು ಬಂದು ದೂರನ್ನಿತ್ತರು. ಸುದ್ದಿ ತಿಳಿದ ಅರಸ ವೈದ್ಯ ಪಂಡಿತರನ್ನೆಲ್ಲ ತನ್ನ ಗದ್ದೆಗಳಿಗೆ ಕರೆಯಿಸಿಕೊಂಡು ಪರಿಶೀಲಿಸಿದಾಗ ಕ್ರಿಮಿಕೀಟಗಳು ಬೆಳೆ ತಿಂದಿರುವುದು ಗಮನಕ್ಕೆ ಬಂದಿತು. ಈ ಸಮಸ್ಯೆಗೆ ಅತೀ ಶೀಘ್ರವಾಗಿ ಹಕ್ಕಿಗಳನ್ನು ತಂದು ಬಿಡಬೇಕೆಂದು ಸಲಹೆಯಿತ್ತಾಗ ಇಡೀ ರಾಜ್ಯ ಹುಡುಕಿಸಿದರೂ ಅರಸನಿಗೆ ಒಂದೇ ಒಂದು ಹಕ್ಕಿಯೂ ಸಿಗಲಿಲ್ಲ. ಪರಿಣಾಮ! ರಾಜನ ಬೆಳೆ ವ್ಯರ್ಥವಾಗಿಯೇ ಹೋಯಿತು.
ಇದು ಅರಸನ ಸಾಮ್ರಾಜ್ಯದ ಕತೆಯಿಂದು ನಾವು ತಾತ್ಸಾರಿಸುವಂತಿಲ್ಲ ಎಂಬುದಕ್ಕೆ ನಿದರ್ಶನವಾಗಿರುವಂತಹದ್ದು ಕೋವಿಡ್ ಕಾಲಘಟ್ಟ. ಹೇರಳವಾಗಿ ಆಮ್ಲಜನಕ ನೀಡುವ ಮರಗಳಿವೆಯೆಂದು ಬೀಗುತ್ತಿದ್ದ ನಾವು ಹಿಡಿ ಆಮ್ಲಜನಕಕ್ಕಾಗಿ ಹೋರಾಡಿದ್ದೇವೆ, ಸೆಣಸಾಡಿದ್ದೇವೆ. ಸಾವು ಬದುಕಿನ ಮಧ್ಯೆ ಹೋರಾಡಿ ಗೆದ್ದವರದ್ದೂ ಸೋತವರದ್ದೂ ಉದಾಹರಣೆಗಳಿವೆ. ಇದು ರೋಗದಿಂದಷ್ಟೇ ಎಂದು ನಾವು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ ಯಾಕೆಂದರೆ ರಾಜ ಹಕ್ಕಿಗಳ ಮಾರಣ ಹೋಮ ಮಾಡಿದಂತೆ ನಗರೀಕರಣದ ಹೆಸರಿನಲ್ಲಿ ಬೃಹದಾಕಾರದ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಧರೆಗುರುಳಿಸುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ರಾಜನ ಸೊರಗಿದ ಗದ್ದೆಯಂತೆ ನಾವು ತುಸು ಆಮ್ಲಜನಕಕ್ಕಾಗಿ ಒದ್ದಾಡಿ ಬೀಳುವ ದಿನ ದೂರವಿಲ್ಲ.
ಭೂಮಿಯಲ್ಲಿ ಇದಕ್ಕಾಗಿ ಜೀವ ಸರಪಳಿಯೆಂಬುದೊಂದು ನಿಯಮವಿದೆ. ‘ಒಂದನ್ನೊಂದು ತಿಂದು ಬದುಕುವುದು ಈ ಸರಪಳಿಯ ಮೂಲ ಆಧಾರವಾಗಿದ್ದು ಇವುಗಳಲ್ಲಿ ಯಾವುದಾದರೊಂದು ಇಲ್ಲವಾದರೆ ಕೊಂಡಿ ಕಳಚಿಬಿದ್ದಂತೆ, ಆದುದರಿಂದಲೇ ಇರುವೆಯಿಂದ ಆನೆಯವರೆಗೆ, ಹಿಡಿ ಹುಲ್ಲಿನಿಂದ ಆಲದ ತನಕದವರೆಗಿನ ಜೀವ ವೈವಿಧ್ಯವನ್ನು ನಾವಿಲ್ಲಿ ಕಾಣಲು ಸಾಧ್ಯ. ಇಂತಹ ವೈವಿಧ್ಯವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದ್ದರೂ ಇಲ್ಲಿ ತಿಂದು ಬದುಕುವುದನ್ನು ಬಿಟ್ಟು ಬುದ್ಧಿಜೀವಿಯಾದ ಮಾನವ ಕೊಂದು ನಿರ್ನಾಮ ಮಾಡಿ ಬದುಕುವುದನ್ನೇ ನೋಡುತ್ತಿದ್ದೇವೆಯೆಂದರೆ ತಪ್ಪಲ್ಲ. ಎಲ್ಲವೂ ನಾಶವಾಗಿ ಕೊನೆಗೆ ಮನುಷ್ಯನೊಬ್ಬನೇ ಬದುಕಿದರೆ ತಿನ್ನುವುದೇನನ್ನು! ಮನುಷ್ಯ ಮನುಷ್ಯನನ್ನೇ ಕೊಂದು ತಿನ್ನಬೇಕಾಗಬಹುದಲ್ಲವೇ? ಊಹಿಸಿ ನೋಡಿ.
ಪ್ರತಿ ವರ್ಷ ಮೇ ೨೨ನೇ ದಿನಾಂಕ ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವೆಂದು ಆಚರಿಸುತ್ತೇವೆ. ಈ ದಿನದ ಮೂಲ ಉದ್ದೇಶವೇ ಜೀವ ವೈವಿಧ್ಯ ನೆಲಕ್ಕೆ, ಬದುಕಿಗೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಅರಿವು ಮೂಡಿಸುವುದು. ಒಬ್ಬರಿಗೊಬ್ಬರು ಹೆಗಲು ನೀಡಿ ಬಾಳುವುದು ಬದುಕು ಅದಲ್ಲದೇ ಕೈಕಡಿದು ಜೀವಿಸುವುದು ಮೂರ್ಖತನ.
Photo credit – wikipedia
ಅಕ್ಷತಾರಾಜ್ ಪೆರ್ಲ