newsroomkannada.com

ಗುರುವಿಗೆ ನಮನ: ಒಂದು ಕಾಲದ IIT ಪ್ರೊಫೆಸರ್ ಇಂದು ಬುಡಕಟ್ಟು ಜನರ ‘ಭಾಗ್ಯ ವಿಧಾತ’!

ಇಂದು ಶಿಕ್ಷಕರ ದಿನಾಚರಣೆ, ಸ್ವಚ್ಛ ಹಾಳೆಯಂತಿರುವ ಮಕ್ಕಳ ಮನಸ್ಸಿನಲ್ಲಿ ಜ್ಞಾನ-ವಿಜ್ಞಾನ ಮತ್ತು ಅರಿವಿನ ಅಕ್ಷರಗಳನ್ನು ಮೂಡಿಸುವ ಗುರುಗಳು ನಮ್ಮೆಲ್ಲರ ಬಾಳಿನ ದಾರಿ ದೀಪಗಳೆಂದರೆ ತಪ್ಪಾಗಲಾರದು.

ಶಾಲೆಗಳಲ್ಲಿ ನಮಗೆ ಕಲಿಸುವ ಗುರುಗಳು ಮಾತ್ರವಲ್ಲದೇ ನಮ್ಮ ಬದುಕಿನುದ್ದಕ್ಕೂ ಜೀವನ ಪಾಠಗಳನ್ನು ಕಲಿಸಿ ನಮ್ಮ ಉನ್ನತಿಗೆ ಸಹಕರಿಸುವ ಹಲವು ಮಹಾನುಭಾವರನ್ನು ನಾವು ಗುರುಗಳೆಂದೇ ಸ್ಮರಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ, ತನ್ನೆಲ್ಲಾ ಸುಖಗಳನ್ನು ತ್ಯಾಗ ಮಾಡಿ ಸಮಾಜದಲ್ಲಿ ತುಳಿತಕ್ಕೊಳಗಾದ ಮತ್ತು ಮುಖ್ಯವಾಹಿನಿಯಿಂದ ದೂರವಿರುವ ಸಮುದಾಯವೊಂದರ ಉನ್ನತಿಗಾಗಿ ಕಳೆದ ಹಲವಾರು ದಶಕಗಳಿಂದ ಶ್ರಮಿಸುತ್ತಿರುವ ಮಹಾನ್ ಚೇತನವೊಂದರ ಪರಿಚಯನ್ನು ‘ಶಿಕ್ಷಕರ ದಿನಾಚರಣೆ’ಯ ಈ ಸಂದರ್ಭದಲ್ಲಿ ಮಾಡಿಕೊಳ್ಳುವುದು ಅತೀ ಮುಖ್ಯವೆಂದು ಭಾವಿಸುತ್ತಿದ್ದೇವೆ.

ಇವರು ಒಂದು ಕಾಲದಲ್ಲಿ ದೆಹಲಿ ಐಐಟಿ (IIT Dehli) ಯಲ್ಲಿ ಪ್ರೊಫೆಸರ್ ಆಗಿದ್ದವರು, ಮಾತ್ರವಲ್ಲದೇ RBIನ ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಅವರಿಗೂ ಗುರುಗಳಾಗಿದ್ದವರು.

ಆದರೆ, ತನ್ನ ಈ ಉನ್ನತ ಹುದ್ದೆಯನ್ನು ತೊರೆದು ಕಳೆದ 32 ವರ್ಷಗಳಿಂದ ಬುಡಕಟ್ಟು ಸಮುದಾಯದವರೊಂದಿಗೆ ತಾನೂ ಒಂದಾಗಿ ಬದುಕುತ್ತಾ ಅವರ ಉನ್ನತಿಗಾಗಿ ಶ್ರಮಿಸುತ್ತಿರುವ ಮಹಾನ್ ವ್ಯಕ್ತಿಯೇ ಪ್ರೊಫಸರ್ ಅಲೋಕ್ ಸಾಗರ್ (Prof Alok Sagar).


ದೆಹಲಿ ಐಐಟಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಲೋಕ್ ಸಾಗರ್ ಅವರು ಬಳಿಕ ಹ್ಯೂಸ್ಟನ್ ವಿಶ್ವವಿದ್ಯಾನಿಲಯದಿಂದ (University of Houston) ಪಿ.ಹೆಚ್.ಡಿ ಪದವಿಯನ್ನು (Ph.D) ಪಡೆದುಕೊಂಡ ಅದ್ಭುತ ಮೇಧಾವಿ.

ಬಳಿಕ ತಾನು ಕಲಿತ ದೆಹಲಿ ಐಐಟಿಯಲ್ಲೇ ಪ್ರೊಫೆಸರ್ ಆಗಿ ಕೆಲಸಕ್ಕೆ ಸೇರಿದ ಇವರು, ರಘುರಾಮ್ ರಾಜನ್ ಅವರಿಗೂ ಗುರುಗಳಾಗಿದ್ದರು. ಆದರೆ 1982ರಲ್ಲಿ ತನ್ನ ಜೀವನದ ಅತೀ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡ ಅಲೋಕ್ ಸಾಗರ್ ಅವರು ಬುಡಕಟ್ಟು ಜನರ ಸೇವೆಗಾಗಿ ತನ್ನ ಉಳಿದ ಜೀವನವನ್ನು ವಿನಿಯೋಗಿಸುವ ನಿರ್ಧಾರವನ್ನು ತೆಗೆದುಕೊಂಡರು.

ಇದೀಗ ಕಳೆದ 32 ವರ್ಷಗಳಿಂದ ಅಲೋಕ್ ಸಾಗರ್ ಮಧ್ಯಪ್ರದೇಶದ ಬೆತುಲು ಜಿಲ್ಲೆಯಲ್ಲಿರುವ ಕೊಚಮು ಎಂಬ ಮೂಲಭೂತ ಸೌಕರ್ಯ ವಂಚಿತ ಪ್ರದೇಶದಲ್ಲಿ ಅತೀ ಸರಳ ಜೀವನ್ನು ನಡೆಸುತ್ತಾ ಈ ಭಾಗದಲ್ಲಿರುವ ಸುಮಾರು 750 ಬುಡಕಟ್ಟು ಜನರ ಸರ್ವತೋಮುಖ ಅಭಿವೃದ್ಧಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಪ್ರಕೃತಿಯ ನಡುವಿನಲ್ಲಿ ಪ್ರಕೃತಿಯ ಮಕ್ಕಳಾಗಿ ಬದುಕುತ್ತಿರುವ ಈ ಬುಡಕಟ್ಟು ಜನರ ಜೊತೆ ತಾವೂ ಒಬ್ಬರಾಗಿ ಈ ಫ್ರೊಫೆಸರ್ ಬದುಕುತ್ತಿದ್ದು ಅವರಿಗೆ ತಮ್ಮಲ್ಲಿರುವ ಜ್ಞಾನವನ್ನು ಹಂಚುತ್ತಾ ಅವರಿಂದ ಪ್ರಕೃತಿಯ ಪಾಠವನ್ನು ಕಲಿಯುತ್ತಾ ಬದುಕಿತ್ತಿದ್ದಾರೆ.

ಪ್ರೊ. ಅಲೋಕ್ ಸಾಗರ್ ಅವರ ತಾಯಿ ಭೌತಶಾಸ್ತ್ರ ಉಪನ್ಯಾಸಕಿ, ತಂದೆ ರೆವೆನ್ಯೂ ಸರ್ವಿಸ್ ಆಫಿಸರ್ ಆಗಿದ್ದವರು. ಅಲೋಕ್ ಸಾಗರ್ ಹೆಸರಿನಲ್ಲಿ ದೆಹಲಿಯಲ್ಲಿ ಕೋಟಿಗಟ್ಟಲೆ ಮೌಲ್ಯದ ಆಸ್ತಿಯಿದ್ದು, ಇವರು ಇದೀಗ ತನ್ನ ಆಸ್ತಿಯನ್ನೆಲ್ಲಾ ಈ ಜನರ ಕಲ್ಯಾಣಕ್ಕಾಗಿ ಬಳಸುತ್ತಿದ್ದಾರೆ.

ತಾವು ಮಾತ್ರ, ಹುಲ್ಲು ಹಾಸಿನ ಗುಡಿಸಲಿನಲ್ಲಿ ಸರಳವಾಗಿ ವಾಸಿಸುತ್ತಿದ್ದು, ಇವರ ಜೊತೆ ಇರುವುದು ಕೆಲವೇ ಜೊತೆ ಬಟ್ಟೆಗಳು ಮತ್ತು ಓಡಾಡಲು ಒಂದು ಸೈಕಲ್ ಮಾತ್ರ. ಬಹಳಷ್ಟು ಭಾಷೆಗಳನ್ನು ತಿಳಿದುಕೊಂಡಿರುವ ಅಲೋಕ್ ಸಾಗರ್ ಅವರು ಇಲ್ಲಿನ ಸಮುದಾಯದವರೊಂದಿಗೆ ಅವರ ಬುಡಕಟ್ಟು ಭಾಷೆಯಲ್ಲೇ ವ್ಯವಹರಿಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೇ, ಪ್ರಕೃತಿ ಮತ್ತು ಪರಿಸರದ ಉಳಿವಿಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರೊ. ಅಲೋಕ್ ಸಾಗರ್ ಅವರು ಈ ಬುಡಕಟ್ಟು ಪ್ರದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟಿದ್ದಾರೆ. ಇನ್ನು, ಹತ್ತಿರದ ಗ್ರಾಮಗಳಿಗೆ ವಿವಿಧ ತಳಿಗಳ ಗಿಡಗಳ ಬೀಜಗಳನ್ನು ವಿತರಿಸಲು ಪ್ರತೀದಿನ 60 ಕಿಲೋಮೀಟರ್ ಪ್ರಯಾಣಿಸುತ್ತಾರೆ.

ಗ್ರಾಮಗಳ ಅಭಿವೃದ್ಧಿ, ಪರಿಸರ ಅಭಿವೃದ್ಧಿ ಮತ್ತು ಬುಡಕಟ್ಟು ಜನರ ಜೀವನವನ್ನು ಉದ್ಧರಿಸುವಲ್ಲಿ ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಪ್ರೊ. ಅಲೋಕ್ ಸಾಗರ್ ಅವರು ‘ಗುರು’ ಎಂಬ ಪದಕ್ಕೆ ನಿಜಾರ್ಥದ ವಾರಸುದಾರರಾಗಿದ್ದಾರೆ. ಪರಿಸರ ಮತ್ತು ಬುಡಕಟ್ಟು ಜನರ ಬದುಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಪ್ರೊಫೆಸರ್ ಗೊಂದು ‘ಶಿಕ್ಷಕರ ದಿನಾಚರಣೆ’ಯ ಈ ಸಂದರ್ಭದಲ್ಲಿ ನಮ್ಮ ಶತಕೋಟಿ ನಮನಗಳು.

Exit mobile version