main logo

ಮಂಗಳೂರಿನ ಲಾವಣ್ಯ ಬಲ್ಲಾಳ್‌, ಬೆಂಗಳೂರಿನ ಭವ್ಯಾ ನರಸಿಂಹ ಮೂರ್ತಿಗೆ ಕಾಂಗ್ರೆಸ್‌ ನಲ್ಲಿ ಉನ್ನತ ಸ್ಥಾನ

ಮಂಗಳೂರಿನ ಲಾವಣ್ಯ ಬಲ್ಲಾಳ್‌, ಬೆಂಗಳೂರಿನ ಭವ್ಯಾ ನರಸಿಂಹ ಮೂರ್ತಿಗೆ ಕಾಂಗ್ರೆಸ್‌ ನಲ್ಲಿ ಉನ್ನತ ಸ್ಥಾನ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮಿಂಚುತ್ತಿರುವ ಇಬ್ಬರು ಮಹಿಳಾ ನಾಯಕರಿಗೆ ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿ ತನ್ನ ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ಅವಕಾಶ ನೀಡಿದೆ. ಭವ್ಯಾ ನರಸಿಂಹ ಮೂರ್ತಿ ಅವರಿಗೆ ತಮಿಳುನಾಡು ಮತ್ತು ಪುದುಚೇರಿಯ ಪ್ರದೇಶ ಕಾಂಗ್ರೆಸ್‌ನ ಸಂವಹನ ವಿಭಾಗದ ಸಾರಥ್ಯವನ್ನು ನೀಡಲಾಗಿದ್ದರೆ, ಮತ್ತೊಬ್ಬ ನಾಯಕಿ ಲಾವಣ್ಯ ಬಲ್ಲಾಳ್‌ ಅವರನ್ನು ಕೇರಳದ ಮಾಧ್ಯಮ ಸಮನ್ವಯಕಾರರನ್ನಾಗಿ ನೇಮಿಸಲಾಗಿದೆ. 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಯ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಪವನ್‌ ಖೇರಾ ಅವರು ಈ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ.

ಎಐಸಿಸಿ ಸಂವಹನ ಸಮನ್ವಯಕಾರರ ಹುದ್ದೆಗೆ 24 ಮಂದಿಯನ್ನು ನೇಮಕ ಮಾಡಲಾಗಿದ್ದು, ಅದರಲ್ಲಿ ಕರ್ವಾಟಕದ ಲಾವಣ್ಯ ಬಳ್ಳಾಲ್‌ ಜೈನ್‌ ಅವರೂ ಒಬ್ಬರು. ಲಾವಣ್ಯ ಬಲ್ಲಾಳ್‌ ಅವರು ಕಾಂಗ್ರೆಸ್‌ ವಕ್ತಾರರಾಗಿ ಮತ್ತು ಮುಂಚೂಣಿ ಮಹಿಳಾ ಯುವ ನಾಯಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಿರೂಪಣೆ ಮಾಡುತ್ತಿದ್ದಾಗ ಸಿದ್ದರಾಮಯ್ಯ ಅವರು ಯಾರಿದು ನಿರೂಪಣೆ ಮಾಡುತ್ತಿರುವುದು ಬಗ್ಗಿ ನೋಡಿದ್ದು ಭಾರಿ ಸುದ್ದಿಯಾಗಿತ್ತು. ಲಾವಣ್ಯ ಬಳ್ಳಾಲ್‌ ಅವರು ಕಾಂಗ್ರೆಸ್‌ನ ನೀತಿ ನಿಲುವುಗಳನ್ನು ಪ್ರಖರವಾಗಿ ಸಮರ್ಥಿಸುವ ಛಾತಿಯನ್ನು ಹೊಂದಿದ್ದಾರೆ.

ಭವ್ಯಾ ನರಸಿಂಹ ಮೂರ್ತಿ ಅವರು ಕೂಡಾ ಕಾಂಗ್ರೆಸ್‌ ಪಕ್ಷದ ಪ್ರಬಲ ವಕ್ತಾರರು. ಸಿಎಎ ಚಳುವಳಿಯ ಸಂದರ್ಭದಲ್ಲಿ ಚಿಂತಕ ರಾಮಚಂದ್ರ ಗುಹಾ ಅವರನ್ನು ಎಳೆದಾಡಿದ ಪ್ರಕರಣವನ್ನು ನೋಡಿದ ಬಳಿಕ ಸಾಮಾಜಿಕ ಹೋರಾಟದ ಕಣಕ್ಕೆ ಇಳಿದ ಭವ್ಯಾ ಅವರು ಬಳಿಕ ಕಾಂಗ್ರೆಸ್‌ ಪಕ್ಷವನ್ನು ಅಧಿಕೃತವಾಗಿ ಸೇರಿದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ನಿವಾಸಿಯಾಗಿರುವ ಭವ್ಯಾ ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿ ಬಳಿಕ ಅಮೆರಿಕಕ್ಕೆ ತೆರಳಿ ಕೊಲಂಬಿಯಾ ವಿವಿಯಲ್ಲಿ ಮಾಸ್ಟರ್ಸ್‌ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಕಲಿತಿದ್ದಾರೆ. ಅಲ್ಲಿಂದ ಭಾರತಕ್ಕೆ ಮರಳಿ ಸಾಮಾಜಿಕ ಹೋರಾಟ ಆರಂಭಿಸಿದ್ದರು. ಇದೀಗ ಅವರನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪಾಂಡಿಚೇರಿಯ ಕಾಂಗ್ರೆಸ್‌ ಸಂವಹನ ಸಂಯೋಜಕಿಯಾಗಿ ನೇಮಿಸಲಾಗಿದೆ.

ಲಾವಣ್ಯ ಬಲ್ಲಾಳ್‌ ಯಾರು: ಮಂಗಳೂರು ಮೂಲದ ಲಾವಣ್ಯ ಬಲ್ಲಾಳ್‌ ರಾಜಕೀಯ ಕ್ಷೇತ್ರಕ್ಕೆ ಹೋಗುವ ಮುನ್ನ ಖಾಸಗಿ ರೇಡಿಯೋ ಚಾನೆಲ್‌ನಲ್ಲಿ ಆರ್‌ಜೆ ಆಗಿ ಕೆಲಸ ಮಾಡಿದ್ದರು.

ಸಿದ್ಧರಾಮಯ್ಯ ಅವರ ನೋಟಕ್ಕೆ ಸಿಲುಕಿ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೆಂಡಿಂಗ್‌ನಲ್ಲಿರುವ ಲಾವಣ್ಯ ಬಲ್ಲಾಳ್‌ ಜೈನ್‌, ರಾಜಕೀಯಕ್ಕೆ ಬರುವ ಮುನ್ನ ಖಾಸಗಿ ರೇಡಿಯೋ ಚಾನೆಲ್‌ನಲ್ಲಿ ಆರ್‌ಜೆ ಆಗಿ ಕೆಲಸ ಮಾಡಿದ್ದುರು. ಪ್ರಸ್ತುತ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ಸಂಯೋಜಕಿ ಹಾಗೂ ವಕ್ತಾರೆಯ ಹುದ್ದೆಯಲ್ಲಿದ್ದಾರೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೀ ಯಾತ್ರೆಯ ವೇಳೆಯಲ್ಲೂ ಅವರು ಭಾಗವಹಿಸಿದ್ದರು. ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಿದ್ದನ್ನು ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಲಾವಣ್ಯ ಬಲ್ಲಾಳ್‌ ಜೈನ್‌, ದಕ್ಷಿಣ ಕನ್ನಡದ ಬಂಟ್ವಾಳ ಮೂಲದವರು. ಎಸ್‌ವಿಎಸ್‌ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಲಾವಣ್ಯ ಬಲ್ಲಾಳ್‌, ಜೈನ ಸಮುದಾಯದವರು. 2018ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಆರ್‌ಜೆ ಕೆಲಸಕ್ಕೆ ರಾಜೀನಾಮೆ ನೀಡಿ, ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಸೇರುವ ನಿರ್ಧಾರ ಮಾಡಿದ್ದರು. ಕನ್ನಡ, ಹಿಂದಿ, ತುಳು ಹಾಗೂ ಇಂಗ್ಲೀಷ್‌ ಅನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಲಾವಣ್ಯ ಬಲ್ಲಾಳ್‌, ಬಿಸಿಎ ಪದವಿ ಪಡೆದಿದ್ದಾರೆ ಆರ್‌ಜೆ ಆಗುವ ಮುನ್ನ ಬೆಂಗಳೂರಿನ ಎನ್‌ಐಐಟಿಯಲ್ಲಿ 11 ತಿಂಗಳು ಎಚ್‌ಆರ್‌ ಅಸಿಸ್ಟೆಂಟ್‌ ಆಗಿಯೂ ಇವರು ಕೆಲಸ ಮಾಡಿದ್ದರು ಎಂದು ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!