ಮಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನಕಲಿ ಮಾಡಿಸಿ ವಂಚನೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮೂವರು ಬಿಹಾರ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.
ದೀಪಕ್ ಕುಮಾರ್ ಹೆಂಬ್ರಮ್ (33), ವಿವೇಕ್ ಕುಮಾರ್ ಬಿಶ್ವಾಸ್ (24) ಮತ್ತು ಮದನ್ ಕುಮಾರ್ (24) ಬಂಧಿತರು. ಇವರನ್ನು ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯಿಂದ ವಶಕ್ಕೆ ಪಡೆಯಲಾಗಿದೆ. ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸೂಚನೆಯಂತೆ ಸೈಬರ್ ಅಪರಾಧ ಬಗ್ಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತಾಂತ್ರಿಕ ಸಾಕ್ಷ್ಯ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬಿಹಾರದಲ್ಲಿ ಅಡಗಿಕೊಂಡಿದ್ದ ಮೂವರನ್ನು ಬಂಧಿಸಿ ಕರೆತಂದಿದ್ದಾರೆ.
ಆರೋಪಿಗಳಿಗೆ ಸಂಬಂಧಪಟ್ಟ ಹತ್ತು ಬ್ಯಾಂಕ್ ಖಾತೆಗಳಿಂದ 3,60,242 ರುಪಾಯಿಗಳನ್ನು ಸೀಜ್ ಮಾಡಲಾಗಿದೆ. ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ತಾಂತ್ರಿಕ ಸಾಕ್ಷ್ಯಗಳ ತನಿಖೆ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿ ಒಂದು ಸಾವಿರಕ್ಕೂ ಹೆಚ್ಚು ಪಿಡಿಎಫ್ ದಾಖಲಾತಿ ಪ್ರತಿಗಳನ್ನು ಹಾಗೂ ಆಂಧ್ರಪ್ರದೇಶ ಸೇರಿ ಇತರ ರಾಜ್ಯಗಳಿಗೆ ಸಂಬಂಧಪಟ್ಟ 300 ಕ್ಕೂ ಹೆಚ್ಚು ಪಿಡಿಎಫ್ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಮಂಗಳೂರಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 20 ವೆಬ್ ಸೈಟ್ ನಿಂದ ಹ್ಯಾಕ್ ಮಾಡಿ, ಗ್ರಾಹಕರ ಆಧಾರ್ ಮಾಹಿತಿಗಳನ್ನು ಸಂಗ್ರಹಿಸಿ ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ಅಕ್ರಮವಾಗಿ ಪಡೆದುಕೊಂಡಿದ್ದರು.
ಈ ಬಗ್ಗೆ ಮಂಗಳೂರಿನ ಸೈಜಲ್ ಠಾಣೆಯಲ್ಲಿ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ವಿಶೇಷ ತನಿಖೆಗಾಗಿ ಸಾರ್ವಜನಿಕರ ಒತ್ತಾಯ ಕೇಳಿಬರುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ಇತ್ತೀಚೆಗೆ ಎಎಸ್‌ಐ ಒಬ್ಬರ ಖಾತೆಯಿಂದಲೂ ಸಬ್ ರಿಜಿಸ್ಟ್ರಾರ್ ಕಚೇರಿಯಿಂದಲೇ ಆಧಾರ್ ಮಾಹಿತಿ ಸೋರಿಕೆಯಾಗಿ ಹಣ ಕಳೆದುಹೋಗಿತ್ತು ಇದೇ ರೀತಿಯ ಅಕ್ರಮ ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ಕಡೆ ಆಗಿದ್ದು ಪ್ರಕರಣ ದಾಖಲಾಗಿತು.