ಮಂಗಳೂರು: ಮಂಗಳೂರಿನ ಕೆಪಿಎಸ್‌ಸಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ತಪಾಸಣೆಗೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗುತ್ತಿದೆ. ಮಂಗಳೂರಿನ ಬಲ್ಮಠ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ ಹುದ್ದೆಗೆ ಪರೀಕ್ಷೆ ನಡೆದಿದ್ದು ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗೆ ವಿದ್ಯಾರ್ಥಿಗಳ ಬಳಕೆ ಮಾಡಿಕೊಳ್ಳಲಾಗಿದೆ. ಸಣ್ಣ ಸಣ್ಣ ಮಕ್ಕಳು ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ತಪಾಸಣೆ ಮಾಡುವ ಕಾರ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ವಿದ್ಯಾರ್ಥಿಗಳು ಮೆಟಲ್ ಡಿಟೆಕ್ಟರ್ ಹಿಡಿದು ಪರೀಕ್ಷಾರ್ಥಿಗಳ ತಪಾಸಣೆ ಮಾಡಿದ್ದಾರೆ. ಮೆಟಲ್ ಡಿಟೆಕ್ಟರ್ ಹಿಡಿದು ನಿಂತ ವಿದ್ಯಾರ್ಥಿಗಳು ಬೇಕಾಬಿಟ್ಟಿಯಾಗಿ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡಿದ್ದಾರೆ. ಪರೀಕ್ಷಾ ಕ್ರಮವನ್ನು ತಡೆಯುವ ದೃಷ್ಟಿಯಿಂದ ಮೊಬೈಲ್ ಜಾಮರ್, ಮೆಟಲ್ ಡಿಟೆಕ್ಟರ್, ಬಯೋ ಮೆಟ್ರಿಕ್ ಫೇಸ್ ಡಿಟೆಕ್ಷನ್ ಹಾಗೂ ಬಾಡಿ ಕ್ಯಾಮೆರಾ ಬಳಕೆಗೆ ಕೆಪಿಎಸ್‌ಸಿ ಸೂಚಿಸಿದೆ. ಆದರೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾಟಾಚಾರದ ತಪಾಸಣೆಯನ್ನು ನಡೆಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಏಳೆಂಟು ವಿದ್ಯಾರ್ಥಿಗಳಿಂದ ಅಭ್ಯರ್ಥಿಗಳ ತಪಾಸಣೆ ಮಾಡಲಾದ ಫೋಟೋಗಳು ಸಿಕ್ಕಿವೆ.