ಮಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಪರೂಪದ ವನ್ಯಜೀವಿ ಉತ್ಪನ್ನ ಆಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಅನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ನ.19ರಂದು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದು ಕೋಟ್ಯಾಂತರ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಕುಂಟಿಕಾನ ಜಂಕ್ಷನ್ ಬಳಿಯ ಪ್ರೈಓವರ್ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯಜೀವಿ ಉತ್ಪನ್ನವಾದ ಅಂಬರ್ ಗ್ರೀಸ್ ವಶದಲ್ಲಿಟ್ಟು ಮಾರಾಟಕ್ಕೆ ಯತ್ನಿಸುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ಉಡುಪಿ ಕೋರ್ಟ್ ಬಳಿ ನಿವಾಸಿ ಜಾಕೀರ್ ಹುಸೈನ್ 53), ಉಡುಪಿ ಅಲೆವೂರು ರಸ್ತೆ ನಿವಾಸಿ ಶ್ಯಾಮ್ ಪ್ರಸಾದ್(46) ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿಯಿದ್ದ 7.73 ಕೋಟಿ ಮೌಲ್ಯದ 7730 ಕೆಜಿ ತೂಕದ ಅಂಬರ್ ಗ್ರೀಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಸಾಗಾಟಕ್ಕೆ ಉಪಯೋಗಿಸಿದ ಕೆಎ-20 ಎಂಎ 5344 ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರು ಹಾಗೂ 2 ಮೊಬೈಲ್ ಫೋನ್ ಅನ್ನು ವಶಪಡಿಸಲಾಗಿದೆ. ಈ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರೂಪದ ಬೆಲೆಬಾಳುವ ಅಂಬರ್ ಗ್ರೀಸ್ ಹಾಗೂ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.