ಮಂಗಳೂರು: ಪ್ರತಿ ವರ್ಷದಂತೆ ಮಳೆಗಾಲದಲ್ಲಿ ಈ ವರ್ಷವೂ ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಅದೇ ರೀತಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಬೃಹತ್ ತೆಂಗಿನ ಮರಗಳು, ಮನೆಗಳು ನೀರುಪಾಲಾಗುತ್ತಿವೆ. ಈ ನಿಟ್ಟಿನಲ್ಲಿ ಸಮುದ್ರ ಕೊರೆತ ತಡೆಗೆ ಹಿಟಾಚಿ ಯಂತ್ರಗಳನ್ನು ಬಳಸಿಕೊಂಡು ಬೃಹತ್ ಕಲ್ಲುಗಳನ್ನು ಅಳವಡಿಸುವ ಕಾರ್ಯ ಸಾಗುತ್ತಿದೆ. ಕಡಲ ತೀರದಲ್ಲಿ ಸಮುದ್ರಕೊರತ ತಡೆಯಲು ಬೃಹತ್ ಕಲ್ಲುಗಳನ್ನು ಅಳವಡಿಸಲಾಗುತ್ತಿದೆ. ಈ ಕಳೆದ ಭಾನುವಾರ ಕಡಲ್ಕೊರೆತ ಸ್ಥಳಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಸ್ಪೀಕರ್ ಖಾದರ್ ಭೇಟಿ ನೀಡಿದ್ದನ್ನು ಸ್ಮರಿಸಬಹುದು.
ಶಾಶ್ವತ ಕಾಮಗಾರಿ ಇಲ್ಲ: ಸಮುದ್ರಕ್ಕೆ ಕೊರೆತ ವೇಳೆ ಬೃಹತ್ ಕಲ್ಲುಗಳನ್ನು ಹಾಕಿ ಅದೂ ಕೂಡ ನೀರು ಪಾಲಾಗುವ ಅವೈಜ್ಞಾನಿಕ ಯೋಜನೆ ಬದಲು ಶಾಶ್ವತ ಕಾಮಗಾರಿ ಅಥವಾ ನೈಸರ್ಗಿಕ ವಿಧಾನಗಳ ಮೂಲಕ ಸಮುದ್ರ ಕೊರೆತ ತಡೆಯಬೇಕು ಎಂಬುದು ಸ್ಥಳೀಯರ ಆಗ್ರಹ. ಪ್ರಸ್ತತ ಕಲ್ಲು ಅಳವಡಿಕೆ ಮಾಡುತ್ತಿದ್ದಾರೆ. ಅದು ಕೇವಲ ಗುತ್ತಿಗೆದಾರರ ಕಿಸೆ ತುಂಬಿಸಬಹುದೇ ಹೊರತು ಸಮುದ್ರ ಕೊರೆತ ತಡೆಯುವುದು ಸಾಧ್ಯವಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.