ಮಂಗಳೂರು: ಜಪ್ಪು ಮಹಾಕಾಳಿಪಡ್ಪುವಿನಲ್ಲಿ ಸ್ಮಾರ್ಟಿ ಸಿಟಿ ಯೋಜನೆಯಡಿ ರೈಲ್ವೇ ಇಲಾಖೆಯಿಂದ ನಡೆಯುತ್ತಿರುವ ಬಾಕ್ಸ್ ಪುಶ್ಶಿಂಗ್ ಅಂಡರ್ ಪಾಸ್ ಕಾಮಗಾರಿಯ ಬಾಕ್ಸ್ ನಿರ್ಮಾಣದ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರುವಿನಿಂದ ಮಹಾಕಾಳಿಪಡ್ಪು ಸಂಪರ್ಕದ ಚತುಷ್ಪಥ ರಸ್ತೆ ಕಾಮಗಾರಿ ಸ್ಮಾರ್ಟ್ ಸಿಟಿ ವತಿಯಿದ ನಡೆಯುತ್ತಿದೆ. ಈ ಮಧ್ಯೆ ಬಾಕಿ ಉಳಿದಿರುವ ರೈಲ್ವೇ ಅಂಡರ್‌ಪಾಸ್‌ನ ಕಾಮಗಾರಿಯು “ಬಾಕ್ಸ್ ಪುಶ್ಶಿಂಗ್’ ವಿಧಾನದ ಮೂಲಕ ರೈಲ್ವೇ ಇಲಾಖೆ ನಡೆಸುತ್ತಿದೆ. ಕೆಲವು ತಿಂಗಳಿನಿಂದ ಈ ಕಾಮಗಾರಿ ಚಾಲನೆಯಲ್ಲಿದೆ. ಸೋಮವಾರ ಸಂಜೆ ಬಾಕ್ಸ್ ಒಂದರ ಸ್ಲ್ಯಾಬ್ ಗೆ ಕಾಂಕ್ರೀಟ್ ಹಾಕುತ್ತಿದ್ದಾಗ ಸ್ಲ್ಯಾಬ್ ಕುಸಿದಿದೆ. ಈ ವೇಳೆ ಸುಮಾರು 12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. 11ನೇ ಲೋಡ್ ಕಾಂಕ್ರೀಟ್ ಹಾಕುತ್ತಿದ್ದಾಗ ಘಟನೆ ನಡೆದಿದೆ.