ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಚರಿಸಲಾಗುತ್ತಿರುವ “ಮಂಗಳೂರು ದಸರಾ’ ಸಂಭ್ರಮದ ಬೃಹತ್ ಶೋಭಾಯಾತ್ರೆ ಅ. 24ರಂದು ಸಂಜೆ 4ಕ್ಕೆ ಆರಂಭವಾಗಿ ಅ. 25ರ ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ.
ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ತಬ್ಧ ಚಿತ್ರಗಳ ಸಂಘಟಕರ ಸಭೆಯನ್ನು ಈಗಾಗಲೇ ನಡೆಸಲಾಗಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನಡೆಯುವ ಶೋಭಾ ಯಾತ್ರೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.
ಹಸುರು ಕೊಡೆಗಳು, ಜಾನಪದ ಕಲಾ ತಂಡಗಳ ಬಳಿಕ ನಾರಾಯಣ ಗುರು, ಗಣಪತಿ, ನವದುರ್ಗೆಯರ ಸಹಿತ ಶಾರದೆಯ ಟ್ಯಾಬ್ಲೋಗಳು ತೆರಳಲಿವೆ. ಬಳಿಕ ವೇಷಭೂಷಣಗಳ ಸ್ತಬ್ಧಚಿತ್ರಗಳು ಸಾಗಿ ಬರಲಿವೆ.
ಸಾಮರಸ್ಯದ ಸಂಕೇತವಾಗಿ ಕ್ರಿಶ್ಚಿಯನ್ ಬಾಂಧವರಿಂದ ಸ್ತಬ್ಧಚಿತ್ರ, ಮಂಗಳೂರು ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಮಂಗಳೂರು ಅಭಿವೃದ್ಧಿಯ ಹಿಂದೆ ಹಿಂದೂ-ಮುಸ್ಲಿಂ-ಕ್ರೈಸ್ತ ಸಮುದಾಯದ ಸಹಬಾಳ್ವೆಯ ಸ್ತಬ್ದಚಿತ್ರಗಳಿರಲಿವೆ.
ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ಅ.23ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಲಿದ್ದಾರೆ.