ಮಂಗಳೂರು: ರಾಜ್ಯದ ಕರಾವಳಿ ನಗರಗಳಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿಯ (Smart City) ಮಹಾನಗರ ಪಾಲಿಕೆಯ (Mangaluru City Corporation) ನೂತನ ಮೇಯರ್ (Mayor) ಆಗಿ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಉಪ ಮೇಯರ್ ಆಗಿ ಸುನೀತಾ ಸಾಲಿಯಾನ್ ಆಯ್ಕೆಯಾಗಿದ್ದಾರೆ.
ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಇಂದು (ಸೆ.08) ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸುಧೀರ್ ಶೆಟ್ಟಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸುನೀತಾ ಸಾಲಿಯಾನ್ ನಾಮಪತ್ರವನ್ನು ಸಲ್ಲಿಸಿದ್ದರು.
ವಿರೋಧ ಪಕ್ಷ ಕಾಂಗ್ರೆಸ್ ನಿಂದಲೂ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ಸುಧೀರ್ ಶೆಟ್ಟಿ ಹಾಗೂ ಸುನೀತಾ ಸಾಲಿಯಾನ್ ಅವರು ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ, ಸ್ಥಾಯಿ ಸಮಿತಿ 4 ಸದಸ್ಯರ ಆಯ್ಕೆಗೂ ಚುನಾವಣೆ ಕೂಡ ನಡೆಯಿತು.
ಪಾಲಿಕೆಯ ಮುಂದಿನ ಅವಧಿಗೆ ನಾಲ್ಕನೇ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಿತು. ಒಟ್ಟು, ಪಾಲಿಕೆಯ ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್.ಡಿ.ಪಿ.ಐ 2 ಸ್ಥಾನಗಳನ್ನು ಹೊಂದಿವೆ.
ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಈ ಚುನಾವಣೆಯಲ್ಲಿ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣೆ ಪ್ರಕ್ರಿಯೆ ಗಳನ್ನು ನಡೆಸಿಕೊಟ್ಟರು.