ಮಂಗಳೂರು: ‘ನಾವೆಲ್ಲರೂ ಗಣೇಶನ ಭಕ್ತರೇ.. ಹೊರಗಿನವರು ಅಂದ್ರೆ ಯಾರು? ನಾವೆಲ್ಲರೂ ಈ ದೇಶದಲ್ಲಿ ಇರುವವರೇ, ನಾವೆಲ್ಲ ವಿವಿಯ ಗಣೇಶೋತ್ಸವಕ್ಕೆ ಬಂದೇ ಬರ್ತೇವೆ ಅಲ್ಲಿ ಇರ್ತೇವೆ, ಅದರಲ್ಲಿ ಎರಡು ಪ್ರಶ್ನೆಯೇ ಇಲ್ಲ ನೀವು ಅರೆಸ್ಟ್ ಮಾಡೋದಾದ್ರೆ ಮಾಡಿ..’ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ.
ಮಂಗಳೂರು ಯುನಿವರ್ಸಿಟಿಯಲ್ಲಿ ಗಣೇಶೋತ್ಸವ ನಡೆಸುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಸೈಗೋಳಿ ಮೈದಾನದಲ್ಲಿ ಸಂಘ ಪರಿವಾರದ ಸಂಘಟನೆಗಳಿಂದ ಪ್ರತಿಭಟನಾ ಸಭೆ ನಡೆಯಿತು.
ಈ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಡಾ. ಪ್ರಭಾಕರ ಭಟ್, ಯುಟಿ ಖಾದರ್ ಹೆಸರೆತ್ತದೆ, ಟಾಂಗ್ ನೀಡಿದ್ದಾರೆ. ‘ಮಂಗಳೂರು ವಿವಿಯಲ್ಲಿ ಹೊರಗಿನವರು ಅಂದ್ರೆ ಯಾರು, ನಾವೆಲ್ಲ ಇಲ್ಲಿನವರೇ.. ವಿವಿಯಲ್ಲಿ ಒಳಗಿರೋರು ಅಂದ್ರೆ ಅಲ್ಲಿನ ವಿದ್ಯಾರ್ಥಿಗಳು, ಅವರು ಬೇರೆ ಬೇರೆ ಜಾಗದಿಂದ ಬಂದವರಿದ್ದಾರೆ. ಇಡೀ ರಾಜ್ಯದಿಂದ ಅಲ್ಲಿಗೆ ಜನ ಬಂದಿರ್ತಾರೆ, ಇದರಲ್ಲಿ ಹೊರಗಿನವರು ಅಂತ ಇಲ್ಲ ಅಲ್ಲಿ ಗಣೇಶೋತ್ಸವಕ್ಕೆ ಬಂದರೆ ಏನು ಮಾಡ್ತಾರೆ, ಇವರು ಅರೆಸ್ಟ್ ಮಾಡ್ತಾರೆಯೇ? ನಾನು ಗಣೇಶೋತ್ಸವಕ್ಕೆ ಬಂದೇ ಬರ್ತೇನೆ. ನನ್ನನ್ನ ಅರೆಸ್ಟ್ ಮಾಡಿದ ತುಂಬಾ ಸಂತೋಷ, ಅರೆಸ್ಟ್ ಆಗದೇ ತುಂಬಾ ಸಮಯ ಆಯ್ತು. ಅಲೆಸ್ಟ್ ಮಾಡಿದರೆ ಮಾಡಲಿ, ಅದರಲ್ಲಿ ನನಗೆ ಗಡಿಬಿಡಿ ಇಲ್ಲ..’ ಎಂದು ಹೇಳಿದರು.
‘ಗಣೇಶೋತ್ಸವಕ್ಕೆ ಯಾರೂ ಬರಬಾರದು ಅನ್ನೋದು ಒಳ್ಳೆಯ ಮಾತಲ್ಲ ಸ್ಪೀಕರ್ ಆದವರು ಹಾಗೆಲ್ಲ ಮಾತನಾಡಬಾರದು, ಅವರು ಎಲ್ಲರನ್ನ ಒಂದೇ ಕಲ್ಪನೆಯಲ್ಲಿ ಕೊಂಡುಹೋಗಬೇಕು. ನಮ್ಮದು ಧರ್ಮಾಧರಿತ ದೇಶ, ಜಗತ್ತಿನ ಮೋಸ್ಟ್ ಸೆಕ್ಯುಲರ್ ಎಂದರೆ ಹಿಂದು ಮಾತ್ರ ಯಾವುದೇ ಹಿಂದು ಸಮಾಜದ ಮಧ್ಯೆ ಮುಸ್ಲಿಂ ಅಥವಾ ಕ್ರಿಸ್ಟಿಯನ್ನರು ಬದುಕುತ್ತಾರೆ. ಅವರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಇದೇ ಈ ದೇಶದ ಜಾತ್ಯತೀತ ಮನೋಭಾವ ಇದರ ಬಗ್ಗೆ ಭಾರತದ ಹಿಂದುಗಳಿಗೆ ಇನ್ನೊಬ್ಬರಿಂದ ಕಲಿಯಬೇಕಾಗಿಲ್ಲ..’ ಎಂದು ಪ್ರಭಾಕರ ಭಟ್ ಇದೇ ಸಂದರ್ಭದಲ್ಲಿ ಗುಡುಗಿದರು.
‘ಹಾಗಂತ, ಪೂಜೆಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ನಿಮ್ಮ ದೇವರನ್ನ ನೀವು ಪೂಜೆ ಮಾಡಿ, ನಮ್ಮದಕ್ಕೆ ವಿರೋಧ ಬೇಡ. ಮಂಗಳೂರು ವಿವಿ ಅನ್ನೋದು ಹಿಂದುಗಳು ಮೆಜಾರಿಟಿ ಇರೋ ಒಂದು ಸಂಸ್ಥೆ ಅಲ್ಲಿ ದೇವರನ್ನು ಪೂಜೆ ಮಾಡಬಾರದು ಅಂದ್ರೆ ಏನರ್ಥ. ಈ ದೇಶದಲ್ಲಿ ಸೆಕ್ಯೂಲರ್ ಅಂತ ಹೇಳಿಕೊಂಡು ತಿರುಗಾಡುವ ಹೆಸರಿನಿಂದ ಹಿಂದೂಗಳ ಜೀವನಕ್ಕೆ ತೊಂದರೆ ಆಗಿದೆ. ಸೆಕ್ಯುಲರ್ ಹೆಸರಲ್ಲಿ ನಮ್ಮ ಆರಾಧನೆ, ಪದ್ಧತಿಗಳಿಗೆ ತೊಂದರೆ ಮಾಡಲು ಬರುವುದನ್ನು ನಾವು ಸಹಿಸಲ್ಲ, ಅವರ ಮಸೀದಿ, ಮನೆಯಲ್ಲಿ ಅಲ್ಲಾನನ್ನೇ ಪೂಜೆ ಮಾಡಲಿ, ನಾವು ಬೇಡ ಎನ್ನಲ್ಲ ಇದು ರಾಷ್ಟ್ರಧರ್ಮ, ಹಾಗಾಗಿ ಮುಸಲ್ಮಾನರೂ ನಮ್ಮ ಪದ್ಧತಿ, ಸಂಸ್ಕೃತಿಗೆ ಗೌರವ ಕೂಡಲಿ, ಎಲ್ಲರೂ ಒಟ್ಟಿಗೆ ಬದುಕಬೇಕಾಗಿದೆ ಅದಕ್ಕಾಗಿ ನಾವು ಪರಸ್ಪರ ಗೌರವಿಸಬೇಕು’ ಎಂದು ಡಾ. ಭಟ್ ಹೇಳಿದರು..
‘ಇವರು ನಿನ್ನೆ ಕಮ್ಯುನಿಷ್ಟರಿಗೆ ಕಾರ್ಯಕ್ರಮ ಮಾಡಲು ವಿವಿಯಲ್ಲಿ ಅವಕಾಶ ಕೊಡ್ತಾರೆ. ಹಿಂದೂ ವಿರೋಧಿ ಮಾತನಾಡುವ ಶಂಸುಲ್ ಇಸ್ಲಾಂಗೆ ಅವಕಾಶ ಕೊಡಲಿಲ್ವಾ? ಹಾಗಾದ್ರೆ ಹಿಂದುಗಳು ಗಣೇಶೋತ್ಸವ ಮಾಡಬಾರದು ಎನ್ನುವುದು ಧೂರ್ತತನ..’ ಎಂದರು ಕಲ್ಲಡ್ಕ ಪ್ರಭಾಕರ ಭಟ್
ಮಂಗಳೂರು ವಿವಿಯ ಕ್ಯಾಂಪಸ್ ನಲ್ಲಿ ಗಣೇಶೋತ್ಸವ ನಡೆಸುವುದಕ್ಕೆ ಉಪ ಕುಲಪತಿ ಜಯರಾಜ ಅಮೀನ್ ವಿರೋಧ ವ್ಯಕ್ತಪಡಿಸಿದ್ದನ್ನು ವಿರೋಧಿಸಿ ಈ ಪ್ರತಿಭಟನಾ ಸಮಾವೇಶ ನಡೆಯಿತು.