newsroomkannada.com

ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಿಂದ ಪುಸ್ತಕ ವಿತರಣೆ

ಮಂಗಳೂರು: ಜಾತಿ, ಧರ್ಮ ನೋಡದೆ ಕಿಡ್ನಿ ರೋಗಿಗಳ ಡಯಾಲಿಸಿಸ್ ಗೆ ಮಾಸಿಕ ಸಹಾಯಧನ, ಕ್ಯಾನ್ಸರ್ ಹಾಗೂ ಇತರ ಮಾರಕ ಕಾಯಿಲೆ ಇರುವವರನ್ನು ಗುರುತಿಸಿ ಸಹಾಯಧನ ನೀಡಲಾಗುತ್ತಿದೆ. ಇಲ್ಲಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಿ ಇತರರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಹೇಳಿದರು.
ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಶನಿವಾರ ಸಂಘದ ಆವರಣದಲ್ಲಿ ನಡೆದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿ, ಪ್ರತಿವರ್ಷ ವಿದ್ಯಾರ್ಥಿ ವೇತನ, ಕಾಯಿಲೆ ಪೀಡಿತರಿಗೆ ಧನಸಹಾಯ, ಕರೊನಾ ಸಂದರ್ಭ ಪಡಿತರ ಕಿಟ್ ವಿತರಣೆ, ನೊಂದ ಮೀನುಗಾರ ಕುಟುಂಬಕ್ಕೆ ನೆರವು ನೀಡಲಾಗುತ್ತಿದೆ. ಈ ವರ್ಷ ಸಾಧಕ ವಿದ್ಯಾರ್ಥಿಗಳು, ಕ್ರೀಡಾಪಟುವಿಗೆ ತಲಾ ಹತ್ತು ಸಾವಿರ ಧನಸಹಾಯದೊಂದಿಗೆ ಸನ್ಮಾನ ಮಾಡಿ  ಪ್ರೋತ್ಸಾಹಿಸಲಾಗಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಎಲ್ಸಿ ಅತ್ಯುತ್ತಮ ಅಂಕ ಗಳಿಸಿದ ಕಸ್ಬಾ ಬೆಂಗರೆಯ ಆಯಿಶಾ ಉನೈಸಾ,  ಮರಿಯಂ ಸಬಾ ಹಾಗೂ ಆಸ್ಟ್ರೇಲಿಯಾದಲ್ಲಿ ಜರಗಲಿರುವ ಲೈಫ್ ಸೇವಿಂಗ್ ವಿಶ್ವ ಚಾಂಪಿಯನ್ ಶಿಪ್ ಗಾಗಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಮಹಮ್ಮದ್ ಅಬ್ದುಲ್ ಬಾಶಿತ್ ಇವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಎಂ.ಎ.ಗಫೂರ್, ಎಸ್.ಕೆ.ಇಸ್ಮಾಯಿಲ್, ಎ.ಎನ್.ಆರ್.ಅನ್ವರ್, ಕೆ.ಎನ್.ಎಚ್. ಇಬ್ರಾಹಿಂ, ಎಸ್.ಎಂ.ಇಬ್ರಾಹಿಂ, ಮುಹಮ್ಮದ್ ಅಶ್ರಫ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ಲತೀಫ್, ಗುತ್ತಿಗೆದಾರ ಮನೋಹರ್ ಮೊದಲಾದವರು ಉಪಸ್ಥಿತರಿದ್ದರು.
ಹಸನ್ ಫಝಲ್ ಕಿರಾಅತ್ ಪಠಿಸಿದರು.
Exit mobile version