ಮಂಗಳೂರು: ನಾಲ್ಕು ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ವಾರಪತ್ರಿಕೆ ಪ್ರಕಟಣೆ ನಿಲ್ಲಿಸಿದೆ. ಒಂದು ಕಾಲದ ಜನಪ್ರಿಯ ವಾರಪತ್ರಿಕೆ ಲಕ್ಷಾಂತರ ಪ್ರತಿ ಮುದ್ರಣವಾದ ದಿನವೇ ಮನೆಗೆ ಪ್ರವೇಶಿಸುತ್ತಿದ್ದ “ಮಂಗಳ” ತನ್ನ ಕೊನೇ ಪ್ರತಿ ಮುದ್ರಿಸಿದೆ. ಸುಮಾರು 25-30 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲೇ ಈ ಪ್ರತಿ ಲಕ್ಷಕ್ಕೂ ಅಧಿಕ ಮಾರಾಟವಾಗುತ್ತಿದ್ದುದು ಸಣ್ಣ ಮಾತೇನಲ್ಲ.
ಆದರೆ ಮುದ್ರಣ ಮಾಧ್ಯಮಗಳ ಓದುಗರು ಕ್ಷೀಣಿಸುತ್ತಿರುವ ಹೊತ್ತಿನಲ್ಲಿ 40 ವರ್ಷ ಪ್ರಕಟಣೆ ಹೊರಡಿಸಿದ್ದ “ಮಂಗಳ”ದ ಕನ್ನಡ ಆವೃತ್ತಿ ಮುದ್ರಣಕ್ಕೆ ಮಂಗಳ ಹಾಡಿದೆ. ಕಳೆದ 14 ವರ್ಷಗಳಿಂದ ಮಂಗಳ ವಾರಪತ್ರಿಕೆಯನ್ನು ಮುನ್ನಡೆಸುತ್ತಿರುವ ಸಂಪಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಭಾವುಕ ವಿದಾಯದ ನುಡಿಗಳನ್ನು ಆಡಿದ್ದಾರೆ. ಉಪಸಂಪಾದಕರಾಗಿ ಮಂಗಳ ಯಾತ್ರೆ ಆರಂಭಿಸಿದ ಎನ್ನೇಬಿ ಅವರ ನೆನಪುಗಳ ಮೆರವಣಿಗೆ ಮಂಗಳ ವಾರ ಪತ್ರಿಕೆಯ ಜೈತ್ರ ಯಾತ್ರೆಯ ಹಲವು ಝಲಕ್‌ಗಳನ್ನು ತೋರಿಸುತ್ತದೆ. ಕೊನೆಯ ಮಾತು ಒಂದು ಹನಿ ಕಂಬನಿ ಸುರಿಯುವಂತೆ ಮಾಡುತ್ತದೆ.
“ಇದು ಅನಿವಾರ್ಯದ ನೋವು …ಈ ಕ್ಷಣದ ತಲ್ಲಣಗಳಿಗೆ ಒಡ್ಡಿಕೊಂಡೇ ಮುಂದಡಿ ಇಡಬೇಕಾದ ಪರಿಸ್ಥಿತಿ .ಮಂಗಳದ ಓದುಗರ ಪಾಲಿಗೆ ಇದು ಅನಿರೀಕ್ಷಿತವಿರಬಹುದಾದರೂ ನಮ್ಮ ಪಾಲಿಗೆ ನಿರೀಕ್ಷಿತವೇ .ಸತತ ಬಂದಪ್ಪಳಿಸಿದ ಕೊರೋನಾ ಮಹಾಮಾರಿ ಇಡೀ ಪತ್ರಿಕೋದ್ಯಮಕ್ಕೆ ಕೊಟ್ಟ ಹೊಡೆತ ಎಂಥಾದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವಂಥಾದ್ದೇ .ಹಾಗಿದ್ದೂ ನಾವು ಮತ್ತೆ ಮೂರು ವರ್ಷ ಸಾಹಸ ಮಾಡುತ್ತಲೇ ಬಂದೆವು .ಆದರೆ ಇದೀಗ ಮಂಗಳವನ್ನು ನಿಲ್ಲಿಸಲೇಬೇಕಾದ ಆರ್ಥಿಕ ತುರ್ತು ಎದುರಾಗಿದೆ .ಕೆಳಗೆ ನೀವು ನೋಡುತ್ತಿರುವುದು , ಕಳೆದ ನಲ್ವತ್ತು ವರ್ಷಗಳಿಂದ ಕನ್ನಡಿಗರ ಮನೆಮಾತಾಗಿದ್ದ ‘ಮಂಗಳ’ ವಾರಪತ್ರಿಕೆಯ ಕೊನೆಯ ಸಂಚಿಕೆ ಎಂದು ಬರೆದುಕೊಂಡಿದ್ದಾರೆ.