ಮಂಗಳೂರು: ಭೂಮಿ ವಿಚಾರದಲ್ಲಿ ವಿವಾದದಿಂದ ಕೊರಗಜ್ಜ ಗುಡಿಗೆ ಬೆಂಕಿ ಇಟ್ಟ ಘಟನೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಬಾಡಾರಿನಲ್ಲಿ ನಡೆದಿದೆ. ಕೊರಗಜ್ಜನ ದೈವ ಸಾನಿಧ್ಯದಲ್ಲಿ ಭೂಮಿ ವಿಚಾರಕ್ಕೆ ಗಲಾಟೆ ನಡೆಯುತ್ತಿದ್ದು, ಇದೇ ಕಾರಣದಿಂದ ಕೊರಗಜ್ಜ ನ ಗುಡಿಗೇ ಸ್ಥಳೀಯ ವ್ಯಕ್ತಿಯೊಬ್ಬ ಗುಡಿಗೆ ಬೆಂಕಿ ಇರಿಸಿದ್ದಾನೆ.
ಬಾಡಾರು ಕೊರಗನ ಕಲ್ಲು ಎಂಬಲ್ಲಿ ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಸಾರ್ವಜನಿಕ ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಈ ಸಂಬಂಧ ಸಮಿತಿ ಮತ್ತು ಖಾಸಗಿ ವ್ಯಕ್ತಿ ನಡುವೆ ತಗಾದೆ ಏರ್ಪಟ್ಟಿತ್ತು. ಈಗ ಸ್ಥಳೀಯ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ ಹಾಕಿದ್ದಾರೆ. ಘಟನೆ ಖಂಡಿಸಿ ಸಮಿತಿಯವರು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.