ಮಂಗಳೂರು: ಚಿನ್ನ ಕಳ್ಳಸಾಗಣೆದಾರರು ನಾನಾ ತಂತ್ರಗಳನ್ನು ಹುಡುಕುತ್ತಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಖೀರ್ ಮಿಕ್ಸ್ ಪೌಡರ್ ಪ್ಯಾಕೆಟ್‌ಗಳಲ್ಲಿ ಚಿನ್ನವನ್ನು ಸಾಗಿಸುವ ಯತ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ.
ಮಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಚಿನ್ನವನ್ನು ದೇಶಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಪ್ರಯಾಣಿಕನನ್ನು ತಡೆದು ತೀವ್ರ ತಪಾಸಣೆ ನಡೆಸಿ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ ಹಳದಿ ಲೋಹವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕ ಅ 6 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಲ್ಲಿ ದುಬೈನಿಂದ ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 374 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನವನ್ನು 5 ಪ್ಯಾಕೆಟ್ ‘ಕಿಚನ್ ಟ್ರೆಷರ್’ ಖೀರ್ ಮಿಶ್ರಣದಲ್ಲಿ ಪ್ಯಾಕ್ ಮಾಡಿದ ಬಿಳಿ ಬಣ್ಣದ ಪುಡಿಯಿಂದ ಹೊರತೆಗೆಯಲಾಗಿದೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.