ಮಂಗಳೂರು: ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಸಂದೇಶ ಹಾಕಿರುವ ಆರೋಪದಲ್ಲಿ ನಗರದ ಉರ್ವ ಠಾಣೆಯ ಪೊಲೀಸರು ಎಸ್‌ಡಿಪಿಐ ಮುಖಂಡ ರಿಯಾಝ್ ಕಡಂಬು ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಅವಹೇಳನಕಾರಿ ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಇಕಾನಾಮಿಕ್ ಹಾಗು ನಾರ್ಕೋಟಿಕ್ಸ್ (ಸೆನ್) ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದಾಖಲಿಸಿಕೊಂಡಿದ್ದರು. ರಿಯಾಝ್ ಕಡಂಬು ನಗರದ ಫ್ಲಾಟ್‌ವೊಂದರಲ್ಲಿ ವಾಸವಾಗಿದ್ದು, ಅಲ್ಲಿಂದ ಉರ್ವ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆರೋಪದಡಿ ಮಂಗಳೂರು ಸೆನ್ ಠಾಣೆಯಲ್ಲಿ ಪೊಲೀಸರು ಮಂಗಳವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಮುಹಮ್ಮದ್ ರಿಯಾಝ್ ಮತ್ತು ಮುಹಮ್ಮದ್ ಮುಸ್ತಫಾ ಎಂಬ ಫೇಸ್‌ಬುಕ್ ಖಾತೆದಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ಕಳುಹಿಸುವ ಮೂಲಕ ಕೋಮು ಭಾವನೆ ಕೆರಳಿಸುವಂತೆ ಮಾಡಲು ಉದ್ದೇಶ ಪೂರ್ವಕವಾಗಿ ಪೋಸ್ಟ್‌ಗಳನ್ನು ಹಾಕಿರುವುದು ಕಂಡು ಬಂದಿರುವುದರಿಂದ ಈ ಎರಡೂ ಫೇಸ್‌ಬುಕ್ ಖಾತೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.