ಬೆಳ್ತಂಗಡಿ: ಊರ ಹೆಸರು ಮಚ್ಚಿನ. ಬಳ್ಳಮಂಜ ಎಂದೇ ಪ್ರಖ್ಯಾತಿ. ನಿರ್ಮಲ ಗ್ರಾಮ ಪುರಸ್ಕೃತ ಈ ಗ್ರಾಮದಲ್ಲಿ ಪ್ರಸಿದ್ಧ ಅನಂತೇಶ್ವರ ದೇವಸ್ಥಾನವಿದೆ. ಗ್ರಾಮದ ಅರ್ಧ ಭಾಗವೂ ಅರಣ್ಯ ತುಂಬಿದೆ. ಮಡಂತ್ಯಾರಿನಿಂದ 5 ಕಿ.ಮೀ. ದೂರದಲ್ಲಿರುವ ಮಚ್ಚಿನ ಗ್ರಾಮ ಪಂಚಾಯಿತಿ ಒಂದು ಗ್ರಾಮವನ್ನು ಹೊಂದಿದೆ. ಗ್ರಾಮದ ವಿಸ್ತೀರ್ಣ 5381.72 ಹೆಕ್ಟೇರ್. 2001ರ ಜನಗಣತಿಯಂತೆ 4764 ಜನಸಂಖ್ಯೆ. ವಿಸ್ತಾರವಾದ ಗ್ರಾಮ ಕೇಂದ್ರ ಸ್ಥಾನ ಬಳ್ಳಮಂಜದಿಂದ ಸುಮಾರು 6-7 ಕಿ.ಮೀ. ದೂರ ಹರಡಿದೆ. ಗ್ರಾಮದಲ್ಲಿ ಅರ್ಧ ಭಾಗ ಅರಣ್ಯ ಬೆಟ್ಟಗುಡ್ಡಗಳೇ ಇವೆ. 14 ಸದಸ್ಯರ ಗ್ರಾಮವಿದು.
ಹೆಸರಿನ ಹಿಂದೆ: ಭತ್ತ ಯಥೇಚ್ಛವಾಗಿ ಇಲ್ಲಿ ಬೆಳೆಯುತ್ತಿದ್ದು, ಬಂಗಾರದ ಊರು, ಮಹಾಚಿನ್ನ ಊರು ಎಂದು ಜನರು ಈ ಊರನ್ನು ಕರೆಯುತ್ತಿದ್ದರು. ಹಾಗಾಗಿ ಮಹಚಿನ್ನಿ ಕ್ರಮೇಣ ಮಚ್ಚಿನವಾಯಿತು. ಅಲ್ಲದೆ ಬಂಗಾರದ ಸಂಸ್ಥಾನದವರು ಇಲ್ಲಿ ಆಳ್ವಿಕೆ ನಡೆಸಿದದ್ದರಿಂದ ಬಂಗಾರ ಮಹಾಚಿನ್ನ ಮಚ್ಚಿನವಾಗಿರಬಹುದು ಎನ್ನಲಾಗಿದೆ. ಬಳ್ಳಮಂಜ ಎಂದರೆ ಬೆಳ್ಳಿಯ ಹುತ್ತ ಎಂದು ಪಂಡಿತರು ವ್ಯಾಖ್ಯಾನಿಸುತ್ತಾರೆ. ಸುಮಾರು 800 ವರ್ಷಗಳ ಇತಿಹಾಸ ಬಳ್ಳಮಂಜಕ್ಕಿದೆ. ಪಾಡ್ದನ ಆಧಾರ ಮೇಲೆ ಬೆಳ್ಳಿ ಹುತ್ತ ಉದ್ಭವಿಸಿದ ಸ್ಥಳವೇ ಬಳ್ಳಮಂಜ. ಪ್ರಾಚೀನ ಕಾಲದಲ್ಲಿ ಬಂಗಾರ ಸಂಸ್ಥಾನಕ್ಕೆ ಬಳ್ಳಮಂಜ ಒಳಪಟ್ಟಿತ್ತು. ಸ್ಥಳೀಯ ಜೈನ ಬಳ್ಳಾಲನು ಆಡಳಿತ ನಡೆಸುತ್ತಿದ್ದನು ಎನ್ನುವ ಐತಿಹ್ಯ ಇದೆ.
ಇದಕ್ಕೊಂದು ಕತೆಯೂ ಇದೆ. ಸೇಂದಿ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬಳು ಸೇಂದಿ ಮಾರಿ ಬಳ್ಳ(ಐದು ಕುಡ್ತೆಯ ಭತ್ತ ಅಳೆಯುವ ಮರದ ಸಾಧನ)ದಲ್ಲಿ ಭತ್ತ ಅಳೆದುಕೊಂಡು ಗೋಣಿ ಚೀಲಕ್ಕೆ ತುಂಬಿಕೊಳ್ಳುತ್ತಾಳೆ. ಅದನ್ನು ಮತ್ತೊಬ್ಬನಲ್ಲಿ ಹೊರಿಸಿ ಮನೆಗೆ ಹೊರಟಳು. ಮನೆ ಹತ್ತಿರವಾಗುತ್ತಿದ್ದಂತೆ ಚಿಲ್ಲರೆ ಹಣವನ್ನು ಬಳ್ಳದಲ್ಲಿ ಹಾಕಿ ಸೇಂದಿಕಟ್ಟೆಯಲ್ಲಿ ಬಿಟ್ಟುಬಂದಿರುವುದು ನೆನಪಾಯಿತು. ಅದನ್ನು ಭತ್ತ ಹೊರುವವನಲ್ಲಿ ತಿಳಿಸಿ ಗೋಣಿ ಕೆಳಗಿಡು ಹಿಂದೆ ಹೋಗಿ ಹಣ ತರೋಣ ಎಂದಳು. ಗೋಣಿಯನ್ನು ಕೆಳಗಿಳಿಸಿದ ಕೂಡಲೇ ವಿಶಾಲ ಹುತ್ತದ ರಾಶಿ ಅಲ್ಲಿ ಕಾಣಿಸಿತು. ಸಾವರಿಸಿಕೊಂಡು ಸೇಂದಿಕಟ್ಟೆಗೆ ತಲುಪಿದರು. ಈ ಸಂದರ್ಭ ಬಳ್ಳದಲ್ಲಿ ಚಿಲ್ಲರೆ ಹಣ ತೆಗೆಯಲು ಹೊರಟಾಗ ಬಳ್ಳದಲ್ಲುದಿಸಿದ ಅನಂತನ ವಿಶ್ವರೂಪವನ್ನು ಕಂಡು ಬೆರಗಾಗಿ ಅಯ್ಯೋ ಮಗ ಬಳ್ಳಮಂಜಾ ಎಂದು ಉದ್ಗರಿಸಿದಳು. ಮಂಜ ಎಂದರೆ ಬಿಳಿಯ ನಾಮದವ ಎಂದರ್ಥ. ಅಲ್ಲದೆ ತುಳುವಿನಲ್ಲಿ ನಾಗರಹಾವನ್ನು ಮಂಜಲ್‌ದವು (ಅರಸಿನ ಬಣ್ಣದವನು) ಎಂದು ಹೇಳುವ ರೂಢಿ ಇದೆ. ಹಾಗಾಗಿ ಬಳ್ಳದಲ್ಲಿ ಮಂಜಲ್‌ದವು ಉದಿಸಿದ ಕಾರಣ ಬಳ್ಳಮಂಜ ಎಂದಾಯಿತು ಎಂಬುದು ಕತೆ.
ಬಳ್ಳಮಂಜ ಷಷ್ಠಿ ಮಹೋತ್ಸವಕ್ಕೆ ಕರಾವಳಿಯಾದ್ಯಂತ ಫೇಮಸ್. ಸುಬ್ರಹ್ಮಣ್ಯದಿಂದ ಗರುಡನ ಆಗಮನವಾದ ಬಳಿಕವೇ ತೇರು ಎಳೆಯುವ ಸಂಪ್ರದಾಯವಿದೆ. ಮಚ್ಚಿನದಲ್ಲಿ ದೇವರ ಉತ್ಸವ ಮಾತ್ರವಲ್ಲದೆ ಮೊಸರುಕುಡಿಕೆ ಉತ್ಸವ ನಡೆಯುತ್ತದೆ, ಭಜನಾ ಕಾರ್ಯಕ್ರಮಗಳೂ ನಡೆಯುತ್ತದೆ. ಮಚ್ಚಿನದ ಮೊಸರುಕುಡಿಕೆ ಉತ್ಸವದಲ್ಲಿ ಬೈಕ್ ಟ್ರಾಕ್ ರೇಸ್ ಕೆಲವರ್ಷಗಳಿಂದ ಪ್ರಾರಂಭಿಸಲಾಗಿದೆ.
ಶಿಕ್ಷಣ ಬ್ಯಾಂಕಿಂಗ್
ಗ್ರಾಮದಲ್ಲಿ 7 ಅಂಗನವಾಡಿ ಕೇಂದ್ರ, ಒಂದು ಪ್ರೌಢಶಾಲೆ, 3 ಕಿರಿಯ ಪ್ರಾಥಮಿಕ ಶಾಲೆ, 2 ಹಿರಿಯ ಪ್ರಾಥಮಿಕ ಶಾಲೆ, 1 ಪ್ರೌಢಶಾಲೆ ಇದೆ. ಮೊರಾರ್ಜಿ ವಸತಿ ಶಾಲೆಯೂ ಇಲ್ಲಿದೆ. ಮಚ್ಚಿನ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿದೆ. ಸೇವಾಸಹಕಾರಿ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್ ಇಲ್ಲಿನ ಪ್ರಮುಖ ಬ್ಯಾಂಕ್‌ಗಳು.
ಸಾಧಕರ ಸಾಲು
ಡಾ.ಕೆ.ಎಂ.ಶೆಟ್ಟಿ ಬಳ್ಳಮಂಜ ಎಂದು ಚಿರಪರಿಚಿತರಾದ ಡಾ.ಮಾಧವ ಶೆಟ್ಟಿ ಗ್ರಾಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಚಿತ್ರಕಲೆಯಲ್ಲಿ ಶ್ರೀಪತಿ ರಾವ್, ಸಂಗೀತದಲ್ಲಿ ಶ್ಯಾಮಲಾ ನಾಗರಾಜ್, ಸಮಾಜ ಸೇವಕಿಯಾಗಿ ಮಚ್ಚಿನ ಶಾಲೆಯ ಶಿಕ್ಷಕಿ ಆನಂದಿ, ಚೆಂಡೆವಾದಕ ಪುರುಷೋತ್ತಮ ದೇವಾಡಿಗ, ಸ್ಯಾಕ್ಸೋಫೋನ್ ವಾದಕರಾಗಿ ಹರೀಶ್ ದೇವಾಡಿಗ ಹಾಗೂ ಸ್ವಚ್ಛತೆಯಲ್ಲಿ ದೇವರಾಜ್ ದೇವಾಡಿಗ ಸಾಧನೆ ಮಾಡಿದ್ದಾರೆ. ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಈ ಗ್ರಾಮದಲ್ಲಿದ್ದಾಗ ಸಾಹಿತ್ಯ ಕೃಷಿ ಆರಂಭಿಸಿದ್ದರು.
ಬಳ್ಳಮಂಜ ಕಂಬಳ
ದೇವಸ್ಥಾನದ ಹಿನ್ನೆಲೆಯಲ್ಲಿ ಬಂದ ಕಂಬಳ ಬಳ್ಳಮಂಜದಲ್ಲಿ ದೇವಸ್ಥಾನದ ಗದ್ದೆಯಲ್ಲಿ ಜೋಡುಕೆರ ಶೇಷನಾಗ ಕಂಬಳ ಹೆಸರಿನಲ್ಲಿ ಪ್ರತಿವರ್ಷ ನಡೆಯುತ್ತದೆ. ಕರಾವಳಿಯ ನಾನಾ ಭಾಗಗಳಿಂದ ಕೋಣಗಳನ್ನು ತರಲಾಗುತ್ತದೆ. ಷಷ್ಠಿಯ ಬಳಿಕ ಕಿರು ಷಷ್ಠಿ ಒಳಗೆ ಕಂಬಳ ನಡೆಯುತ್ತದೆ. ಬೆಳಗ್ಗೆ ದೇವರ ಪೂಜೆ ಬಳಿಕ ಕಂಬಳ ಪ್ರಾರಂಭವಾಗಿ ಸಾಯಂಕಾಲ ದೇವರ ಪೂಜೆಯ ಒಳಗೆ ಕಂಬಳ ಮುಗಿಯಬೇಕು. ದೇವರು ಕಂಬಳ ನೋಡುತ್ತಾರೆ ಎಂಬ ಪ್ರತೀತಿ ಇದೆ.
ಹರ್ಷ ಸಂಪಿಗೆತ್ತಾಯ
ಲೇಖನ: ಅಶ್ವಿನಿ ಕುದ್ದಣ್ಣಾಯ