ಬೆಳಗಾವಿ: ಆ ಜೋಡಿಗೆ ಆಗಷ್ಟೇ ಮದುವೆಯಾಗಿತ್ತು. ವಿವಾಹದ ಸಂಭ್ರಮದಲ್ಲಿ ಇಬ್ಬರೂ ದರ್ಗಾಕ್ಕೆ ಹೋಗಲು ತೀರ್ಮಾನಿಸಿದ್ದಾರೆ. ಬಾಡಿಗೆ ಕಾರೊಂದನ್ನು ಗೊತ್ತುಮಾಡಿಕೊಂಡು ದರ್ಗಾಕ್ಕೆ ಹೋಗಿದ್ದಾರೆ. ಈ ಸಣ್ಣ ಪ್ರಯಾಣದ ಅವಧಿಯಲ್ಲೇ ವಧುವಿಗೆ ಕಾರಿನ ಚಾಲಕನ ಜತೆ ಪ್ರೇಮಾಂಕುರವಾಗಿದೆ. ಕೆಲವೇ ದಿನಗಳಲ್ಲಿ ಆತನ ಜತೆ ಆಕೆ ಓಡಿಹೋಗಿದ್ದಾಳೆ. ಆದರೆ, ನಂತರ ನಡೆದಿದ್ದು ಮಾತ್ರ ಭಯಾನಕ ಘಟನೆ. ಕಾರು ಚಾಲಕನ ಜತೆಗಿನ ಪ್ರೇಮ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಅಂದಹಾಗೆ ಈ ಘಟನೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ.
ಹೀನಾ ಮೆಹಬೂಬ್ (19) ಹಾಗೂ ಕೊಕಟನೂರ ಗ್ರಾಮದ ತೌಫಿಕ್ ಶೌಕತ್ (24) ಜೋಡಿಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿತ್ತು. ವಿವಾಹದ ಬಳಿಕ ಇಬ್ಬರೂ ಬಾಡಿಗೆ ಕಾರಿನಲ್ಲಿ ದರ್ಗಾಕ್ಕೆ ಹೋಗಿದ್ದರು. ಈ ವೇಳೆ ಕಾರು ಚಾಲಕ ಯಾಸಿನ್ ಅದಮ್ (21) ಮೇಲೆ ಹೀನಾಗೆ ಪ್ರೇಮಾಂಕುರವಾಗಿದೆ. ಇದಾದ ಒಂದೇ ತಿಂಗಳಲ್ಲಿ ಗಂಡನ ಬಿಟ್ಟು ಪ್ರಿಯಕರ ಯಾಸಿನ್ ಜೊತೆ ಹೀನಾ ಓಡಿಹೋಗಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ತೌಫಿಕ್ ಶೌಕತ್ ಹತ್ಯೆಗೆ ಸಂಚು ಹೂಡಿದ್ದ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಯಾಸಿನ್, ಹೀನಾ ಜೋಡಿ ಮೇಲೆ ಮಂಗಳವಾರ ಸಂಜೆ ತೌಫಿಕ್ ದಾಳಿ ನಡೆಸಿದ್ದ. ಲಾಂಗ್ನಿಂದ ಹಲ್ಲೆ ನಡೆಸಿ ಪತ್ನಿ ಹೀನಾಳನ್ನು ಹತ್ಯೆ ಮಾಡಿ, ನಂತರ ಆಕೆಯ ಪ್ರಿಯಕರ ಯಾಸಿನ್ನನ್ನೂ ಕೊಲೆ ಮಾಡಿದ್ದಾನೆ. ಇದೇ ವೇಳೆ, ಜಗಳ ಬಿಡಿಸಲು ಬಂದ ಅತ್ತೆ, ಮಾವನ ಮೇಲೂ ತೌಫಿಕ್ ಲಾಂಗ್ನಿಂದ ಹಲ್ಲೆ ಮಾಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಗಾಯಾಳುಗಳಿಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.