Site icon newsroomkannada.com

ಮಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ (Government Officials) ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.

ಮಂಡ್ಯದ ಲೋಕೋಪಯೋಗಿ ಇಲಾಖೆ ಇಇ ಆಗಿರುವ ಹರ್ಷಾ ಅವರ ಕಚೇರಿ, ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಮನೆ, ಮಂಡ್ಯ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗಳು, ಮಂಡ್ಯದ ಕಚೇರಿ, ಕಲ್ಲಹಳ್ಳಿಯಲ್ಲಿರುವ ಮಾವನ ಮನೆ, ನಾಗಮಂಗಲದಲ್ಲಿರುವ ಫಾರ್ಮ್​ಹೌಸ್​​ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಹಾಸನದ ಆಹಾರ ನೀರಿಕ್ಷಕರ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಫುಡ್ ಇನ್ಸ್‌ಪೆಕ್ಟರ್ ಜಗನ್ನಾಥ್ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕಚೇರಿ ಹಾಗೂ ನಿವಾಸದಲ್ಲಿ ತಲಾಶ್ ಕೈಗೊಂಡಿದ್ದಾರೆ. ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಹಾಗೂ ಕಚೇರಿ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ತಿರುಮಲೇಶ್, ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ತರೀಕೆರೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೇತ್ರಾವತಿ ಮನೆ ಮೇಲೆ ಲೋಕಾಯುಕ್ತ ದಾಳಿ‌ ನಡೆಸಿದೆ. 13 ವರ್ಷದಿಂದ ಅಧಿಕ ಅಸ್ತಿ ಹೊಂದಿರುವ ಆರೋಪದಡಿಯಲ್ಲಿ ಲೋಕಾಯುಕ್ತ ಇನ್ಸ್ ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಕಡೂರು ಪಟ್ಟಣದಲ್ಲಿರುವ ನೇತ್ರಾವತಿ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ಮಾಡಲಾಗುತ್ತಿದೆ.

ಮಂಗಳೂರು: ಮಂಗಳೂರಿನಲ್ಲೂ‌ ಮೆಸ್ಕಾಂ ಇಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮೆಸ್ಕಾಂ ಇಇ ಶಾಂತಕುಮಾರ್ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಮಂಗಳೂರಿನ ಅತ್ತಾವರ ವಿಭಾಗದ ಮೆಸ್ಕಾಂ ಇಇ ಶಾಂತಕುಮಾರ್ ಅವರ ಮಂಗಳೂರಿನ ಮನೆ, ಕಚೇರಿಯಲ್ಲಿ ಲೋಕಾ ಅಧಿಕಾರಿಗಳ ಪರಿಶೀಲನೆ ನಡೆಸಲಾಗಿದೆ. ಅದೇ ರೀತಿ ಶಾಂತಕುಮಾರ್ ಅವರ ಬೆಂಗಳೂರಿನ ನಿವಾಸದ ಮೇಲೂ ದಾಳಿ ನಡೆದಿದೆ. ಶಾಂತಕುಮಾರ್‌ ಕಳೆದ ಐದಾರು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version