ದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lok Sabha elections) ಭಾರತೀಯ ಜನತಾ ಪಾರ್ಟಿ 370 ಹಾಗೂ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ( Amit Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಇಂದು (ಫೆ.10) ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ 2024 ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ಈ ಬಾರಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಸಸ್ಪೆನ್ಸ್ ಇಲ್ಲ. ಹಾಗೂ ಈ ಬಾರಿಯು ಕಾಂಗ್ರೆಸ್ ಹಾಗೂ ಅದನ್ನು ಬೆಂಬಲಿಸುವ ಪಕ್ಷಗಳು ವಿರೋಧ ಪಕ್ಷ ಸ್ಥಾನದಲ್ಲೇ ಇರಲಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಜಮ್ಮು-ಕಾಶ್ಮೀರದಲ್ಲಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಆದ್ದರಿಂದ ದೇಶದ ಜನರು ಬಿಜೆಪಿಗೆ 370 ಸ್ಥಾನಗಳನ್ನು ಮತ್ತು ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ ಎಂದರು. ಇನ್ನು ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಶಿರೋಮಣಿ ಅಕಾಲಿದಳ (ಎಸ್‌ಎಡಿ) ಮತ್ತು ಇತರ ಕೆಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಎನ್‌ಡಿಎ ಒಕ್ಕೂಟವನ್ನು ಸೇರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕುಟುಂಬ ಯೋಜನೆಯಲ್ಲಿ ನಂಬಿಕೆ ಇದೆ ಆದರೆ ರಾಜಕೀಯದಲ್ಲಿ ಅಲ್ಲ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ, ಯಾವುದು ಅಂತಿವಾಗಿಲ್ಲ, ಹಾಗೂ 2024ರ ಚುನಾವಣೆಯು ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವಿನ ಚುನಾವಣೆಯಾಗಿರುವುದಿಲ್ಲ, ಇದು ಅಭಿವೃದ್ಧಿ ಮತ್ತು ಜನರಿಗೆ ನೀಡಿರುವ ಭರವಸೆಯ ಚುನಾವಣೆಯಾಗಲಿದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆಯು ಈ ಸಮಯದಲ್ಲಿ ಮಾತನಾಡಿದ್ದಾರೆ. 1947ರಲ್ಲಿ ದೇಶ ವಿಭಜನೆಗೆ ಅವರ ಪಕ್ಷವೇ ಕಾರಣವಾಗಿರುವುದರಿಂದ ನೆಹರು-ಗಾಂಧಿ ವಂಶಸ್ಥರಿಗೆ ಅಂತಹ ಮೆರವಣಿಗೆಯನ್ನು ಮುಂದುವರಿಸಲು ಯಾವುದೇ ಹಕ್ಕಿಲ್ಲ ಎಂದರು. ಇನ್ನು ಸಂಸತ್ತಿನಲ್ಲಿ ಮಂಡಿಸಿದ ಶ್ವೇತಪತ್ರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 2014ರಲ್ಲಿ ಅಧಿಕಾರವನ್ನು ಕಳೆದುಕೊಂಡಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟ ದೇಶದ ಮುಂದೆ ಯಾವ ಗೊಂದಲವನ್ನು ಬಿಟ್ಟಿದೆ ಎಂಬುದನ್ನು ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ದೇಶಕ್ಕೆ ಇದೆ. ಆ ಸಮಯದಲ್ಲಿ (2014) ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿತ್ತು. ಎಲ್ಲೆಡೆ ಹಗರಣಗಳು ನಡೆಯುತ್ತಿದ್ದವು, ವಿದೇಶಿ ಹೂಡಿಕೆ ಬರುತ್ತಿರಲಿಲ್ಲ, ಆ ಸಮಯದಲ್ಲಿ ನಾವು ಶ್ವೇತಪತ್ರವನ್ನು ಹೊರತಂದಿದ್ದರೆ ಅದು ಜಗತ್ತಿಗೆ ತಪ್ಪು ಸಂದೇಶವನ್ನು ನೀಡುತ್ತಿತ್ತು.