Site icon newsroomkannada.com

ಲೋಕಸಭೆ ಚುನಾವಣೆ: ಕಾಸರಗೋಡು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಶ್ವಿನಿ ಎಂ.ಎಲ್. ಹೆಸರು ಘೋಷಣೆ

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವೆ ಅವರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. 16 ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. 34 ಹಾಲಿ ಕೇಂದ್ರ ಸಚಿವರನ್ನು ಕಣಕ್ಕಿಳಿಸಿದ್ದು ಮೊದಲ ಪಟ್ಟಿಯಲ್ಲಿ ಹೆಸರು ಘೋಷಿಸಲಾಗಿದೆ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಾರಣಾಸಿಯಿಂದ ನರೇಂದ್ರ ಮೋದಿ, ಗಾಂಧಿನಗರ-ಅಮಿತ್ ತಾ, ರಾಜನಾಥ್ ಸಿಂಗ್-ಲಕ್ಕೋ, ಗುನಾ- ಜ್ಯೋತಿರಾಧಿತ್ಯ ಸಿಂಧಿಯಾ, ವಿಧಿಶಾ- ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹೆಸರು ಘೋಷಿಸಲಾಗಿದೆ. ಉತ್ತರ ಪ್ರದೇಶದ 51 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕರ್ನಾಟಕ, ತಮಿಳುನಾಡು ಹಾಗೂ ಓಡಿಶಾದ ಯಾವ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಲ್ಲ. ಹೆಚ್ಚಿನ ಕಡೆ ಹೊಸ ಮುಖಗಳಿಗೆ ಮಣೆ ಹಾಕಿದ್ದು ಹಾಲಿ ಸಂಸದರಿಗೆ ಕೊಕ್ ನೀಡಿದೆ. ಪ್ರತಿ ಕ್ಷೇತ್ರದಲ್ಲಿ ಪಕ್ಷದ ಸರ್ವೆ ಮತ್ತು ಕಾರ್ಯಕರ್ತರ ಪ್ರತಿಕ್ರಿಯೆ ಆಧರಿಸಿ ಟಿಕೆಟ್ ಹಂಚಲಾಗಿದೆ.

ಛತ್ತೀಸ್ಸಢ 6, ದೆಹಲಿ 5, ಅರುಣಾಚಲ 2, ಅಂಡಮಾನ್ ನಿಕೋಬಾರ್ 1. ದಮನ್ ದಿಯು 1. ಗೋವಾ 1, ಜಮ್ಮು ಕಾಶ್ಮೀರ 2, ತ್ರಿಪುರಾ 1, ಉತ್ತರಾಖಂಡ 3 ಸೀಟುಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಿವೆ. ಒಟ್ಟು 26 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಕೇರಳದ ಕಾಸರಗೋಡು ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಆಯ್ಕೆಯಾಗಿದ್ದಾರೆ. ಆಲಪ್ಪುಝ ತೋಭಾ ಸುರೇಂದ್ರನ್, ಅಟ್ಟಿಂಗಾಲ್ ವಿ.ಮುರಲೀಧರನ್, ತಿರುವನಂತಪುರಂ ಕ್ಷೇತ್ರದಲ್ಲಿ ಹಾಲಿ ಸಚಿವ ರಾಜೀವ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಲಾಗಿದೆ. ತೃಶೂರ್ ಕ್ಷೇತ್ರದಲ್ಲಿ ಚಿತ್ರನಟ ಸುರೇಶ್ ಗೋಪಿ ಹೆಸರು ಘೋಷಣೆ ಮಾಡಲಾಗಿದೆ.

Exit mobile version